ADVERTISEMENT

ಭಾರತ ಹಲವು ಧರ್ಮಗಳ ತೊಟ್ಟಿಲು

ಸರ್ವಧರ್ಮಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ವಿವಿಧ ಧರ್ಮ ಗುರುಗಳ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 15:50 IST
Last Updated 15 ಫೆಬ್ರುವರಿ 2020, 15:50 IST
ತುಮಕೂರು ಹೊರಪೇಟೆಯ ಲೂರ್ದು ಮಾತಾ ದೇವಾಲಯದಿಂದ ನಡೆದ ಸರ್ವಧರ್ಮಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಅಬ್ದುಲ್ ಕಲಾಂ, ಮದರ್ ತೆರೇಸಾ, ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.
ತುಮಕೂರು ಹೊರಪೇಟೆಯ ಲೂರ್ದು ಮಾತಾ ದೇವಾಲಯದಿಂದ ನಡೆದ ಸರ್ವಧರ್ಮಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಅಬ್ದುಲ್ ಕಲಾಂ, ಮದರ್ ತೆರೇಸಾ, ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.   

ತುಮಕೂರು: ಇತ್ತೀಚಿನ ದಿನಗಳಲ್ಲಿ ಹಣದ ಮೂಲಕವೇ ವ್ಯಕ್ತಿಯ ವ್ಯಕ್ತಿತ್ವ ಅಳೆಯುತ್ತಿರುವುದರ ಪರಿಣಾಮ ಮೌಲ್ಯಗಳು ಅಪಹಾಸ್ಯಕ್ಕೆ ಒಳಗಾಗಿವೆ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ನಗರದ ಹೊರಪೇಟೆಯ ಲೂರ್ದು ಮಾತಾ ದೇವಾಲಯದ 141ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೌಲ್ಯಗಳನ್ನು ಪ್ರತಿಪಾದಿಸುವವರನ್ನು ಸಮಾಜದಲ್ಲಿ ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಇದು ದುರಂತ’ ಎಂದರು

ಜಗತ್ತಿನ ಯಾವ ಧರ್ಮವೂ ಕೆಟ್ಟದು ಹೇಳಿಲ್ಲ. ಆದರೆ ಅದನ್ನು ಅರ್ಥೈಸುವವರ ಸ್ವಾರ್ಥದಿಂದ ದೇಶದಲ್ಲಿ ಆಗಾಗ ಪ್ರಕ್ಷುಬ್ದ ವಾತಾವರಣಗಳು ಸೃಷ್ಟಿಯಾಗುತ್ತಿವೆ. ನಾವೆಲ್ಲರೂ ದೇವರ ಮಕ್ಕಳು ಎಂಬಂತಹ ಉದ್ದಾತ್ತ ಮನಸ್ಸಿನಿಂದ ಮಾನವ ಧರ್ಮವನ್ನು ಎಲ್ಲರೂ ಪ್ರತಿಪಾದಿಸುವ ಅಗತ್ಯವಿದೆ ಎಂದು ಹೇಳಿದರು.

ADVERTISEMENT

ನಿವೃತ್ತ ಪ್ರಾಂಶುಪಾಲ ಪ್ರೊ.ಸೈಯದ್ ಬಾಷಾ ಮಾತನಾಡಿ, ‘ಭಾರತ ಹಲವು ಧರ್ಮ, ಜಾತಿ, ಸಂಸ್ಕೃತಿಗಳ ತೊಟ್ಟಿಲು. ಇಲ್ಲಿ ನಾವೆಲ್ಲರೂ ಪರಸ್ವರ ಪ್ರೀತಿ, ವಿಶ್ವಾಸದಿಂದ ಬಾಳಿದಾಗ ಮಾತ್ರ ಶಾಂತಿ ನೆಲಸಲು ಸಾಧ್ಯ. ಇಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಎಲ್ಲ ಧರ್ಮಗಳ ಮುಖ್ಯಸ್ಥರು, ದೇಶದ ಐಕ್ಯತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಪರಸ್ಪರರನ್ನು ಗೌರವಿಸುವ ಮೂಲಕ ದೇಶದ ಜನರು ನೆಮ್ಮದಿಯಿಂದ ಬಾಳುವಂತೆ ಮಾಡಬೇಕಿದೆ’ ಎಂದರು.

ಸಿಎಸ್‍ಐ ಚರ್ಚ್‍ಗಳ ಮುಖ್ಯಸ್ಥ ರಜಿನಿ ಪ್ರಕಾಶ್ ಮಾತನಾಡಿ, ‘ಭಾರತದಲ್ಲಿರುವ ಎಲ್ಲಾ ಜಾತಿ, ಧರ್ಮಗಳ ಜನರು ಭಾರತದ ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುತ್ತಾ ಬದುಕುತ್ತಿದ್ದೇವೆ. ಧರ್ಮದ ಹೆಸರಿನಲ್ಲಿ ದೇಶ ಒಡೆಯಲು ಬಿಡದೆ ಸತ್ಯ, ಕರುಣೆ, ಪ್ರೀತಿಯ ಜತೆಗೆ ಭಾತೃತ್ವದೊಂದಿಗೆ ನಾವೆಲ್ಲರೂ ಹೊಸ ಬದುಕು ಕಂಡುಕೊಳ್ಳಬೇಕಿದೆ’ ಎಂದರು.

ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೋ ಶಾಲೆಯ ಮುಖ್ಯಸ್ಥರಾದ ರೇವರೆಂಡ್ ಟಾಮಿ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.