ADVERTISEMENT

‘ಕೊರಮ, ಭೋವಿಯನ್ನು ಎಸ್‌ಸಿಯಲ್ಲೇ ಉಳಿಸಿ’

ಕೊರಮ, ಕೊರಚ, ಭೋವಿ, ಲಂಬಾಣಿ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ತೆಗೆಯದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 17:17 IST
Last Updated 6 ಜೂನ್ 2020, 17:17 IST

ತುಮಕೂರು: ಕೊರಮ, ಕೊರಚ, ಭೋವಿ, ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಪಟ್ಟಿಯಲ್ಲಿ ಮುಂದುವರಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿ ಜೂನ್‌ 10ರಂದು ರಾಜ್ಯದಾದ್ಯಂತ ಪತ್ರಚಳವಳಿ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ ಕುಮಾರ್‌ ಕೊತ್ತಗೆರೆ ಹೇಳಿದರು.

ಅಲೆಮಾರಿಗಳಾದ ಈ ಸಮುದಾಯಗಳು ಇಂದಿಗೂ ಅಸಮಾನತೆ, ತಾರತಮ್ಯ ಹಾಗೂ ಸಾಮಾಜಿಕ ಕಳಂಕಕ್ಕೆ ಗುರಿಯಾಗಿವೆ. ಸಮಾಜದ ಮುಖ್ಯವಾಹಿನಿಗೆ ಬರಲಾಗದೆ ಅಲೆಮಾರಿ ಜಾತಿಗಳಾಗಿಯೇ ಉಳಿದಿವೆ. ಆದ್ದರಿಂದ ಈ ಜಾತಿಗಳನ್ನು ಎಸ್‌ಸಿ ಪಟ್ಟಿಯಲ್ಲೇ ಮುಂದುವರಿಸುವಂತೆ ಸರ್ಕಾರ ಆಯೋಗಕ್ಕೆ ಶಿಫಾರಸು ಮಾಡಬೇಕೆಂದು ಮುಖ್ಯಮಂತ್ರಿಗೆ ಪತ್ರಚಳವಳಿ ನಡೆಸುವ ಮೂಲಕ ಎಚ್ಚರಿಕೆ ನೀಡಲಾಗುವುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊರಚ, ಭೋವಿ, ಲಂಬಾಣಿ ಸಮುದಾಯಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮಿಲ್ಲರ್‌ ಆಯೋಗದ ವರದಿ ಅನುಸಾರ ಶೋಷಿತ ವರ್ಗಗಳ ಪಟ್ಟಿಯಲ್ಲಿದ್ದವು. ನಂತರ ಈ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಜಾತಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಮೂಲಭೂತವಾದಿಗಳು ಕೊರಮ, ಕೊರಚ, ಭೋವಿ, ಲಂಬಾಣಿ ಜಾತಿಗಳನ್ನು ಎಸ್‌ಸಿ ಪಟ್ಟಿಯಿಂದ ಕೈ ಬಿಡುವಂತೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸುಪ್ರಿಂಕೋರ್ಟ್‌ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಅಹವಾಲು ಸಲ್ಲಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಸಿ ಆಯೋಗವು ಕರ್ನಾಟಕ ಸರ್ಕಾರಕ್ಕೆ ವರದಿ ಕೇಳಿದೆ. ಸರ್ಕಾರವು ಎಸ್‌ಸಿ ಪಟ್ಟಿಯಲ್ಲೇ ಈ ಸಮುದಾಯಗಳನ್ನು ಉಳಿಸಲು ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆದರ್ಶ ಯಲ್ಲಪ್ಪ, ಜಿಲ್ಲಾಧ್ಯಕ್ಷ ಮಹದೇವಯಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.