ADVERTISEMENT

ಪಿಂಚಣಿಗೆ ಶಾಲಾ ನೌಕರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 6:29 IST
Last Updated 6 ಡಿಸೆಂಬರ್ 2020, 6:29 IST
ಅನುದಾನಿತ ಶಾಲಾ, ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ವ್ಯವಸ್ಥೆಗೆ ಆಗ್ರಹಿಸಿ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು
ಅನುದಾನಿತ ಶಾಲಾ, ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ವ್ಯವಸ್ಥೆಗೆ ಆಗ್ರಹಿಸಿ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು   

ತುಮಕೂರು: ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ವ್ಯವಸ್ಥೆಗೆ ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಸಂಘದ ಪದಾಧಿಕಾರಿ ವೆಂಕಟಾಚಲಯ್ಯ, ‘ರಾಜ್ಯ ಸರ್ಕಾರ 2006ರಿಂದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ, ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆ ಸೌಲಭ್ಯ ನೀಡಿಲ್ಲ. ಇದರಿಂದ ಸಾವಿರಾರು ನೌಕರರು ಸಂಬಳ ಪಡೆದು ಬರಿಗೈಯಲ್ಲಿ ನಿವೃತ್ತರಾಗಿದ್ದು, ನಿವೃತ್ತಿ ನಂತರ ಸಂಕಷ್ಟದಲ್ಲಿ ಬದುಕು ನಡೆಸುವಂತಾಗಿದೆ’ ಎಂದು ಹೇಳಿದರು.

ಕಳೆದ 10 ವರ್ಷಗಳಿಂದ ಸಂಘಟನೆ ಈ ಬಗ್ಗೆ ಒತ್ತಾಯಿಸುತ್ತಿದ್ದರೂ ಅನುದಾನಿತ ನೌಕರರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಿಲ್ಲ. ಬೇಡಿಕೆ ಈಡೇರಿಸದಿದ್ದರೆ ಜ. 4ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸಂಘದ ತುಮಕೂರು ಘಟಕದ ಅಧ್ಯಕ್ಷ ಹನುಮೇಶ್, ‘ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕೋವಿಡ್ ಆರಂಭದಿಂದ ಸಂಕಷ್ಟದಲ್ಲಿ ಇದ್ದಾರೆ. ಶಾಲೆಗಳು ನಡೆಯದ ಕಾರಣ ವೇತನಗಳು ಸಕಾಲದಲ್ಲಿ ಬಿಡುಗಡೆ ಆಗುತ್ತಿಲ್ಲ ಎನ್ನುವುದು ಒಂದೆಡೆಯಾದರೆ, ನಿವೃತ್ತಿ ನಂತರದ ಬದುಕು ದುಸ್ತರವಾಗಿದೆ’ ಎಂದರು.

ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ. 7ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹಕ್ಕೆ ಸಂಘಟನೆ ತೀರ್ಮಾನಿಸಿತ್ತು. ಆದರೆ ಗ್ರಾಮ ಪಂಚಾಯಿತಿ ಚುನಾವಣೆ ಕಾರಣ ಹೋರಾಟವನ್ನು ಹಿಂಪಡೆದಿದ್ದೇವೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಸಿದ್ದೇಶ್, ಎನ್‌.ನರೇಶ್, ಸಿದ್ಧವೀರಪ್ಪ,
ಸದಾಶಿವಯ್ಯ, ಮಂಜುನಾಥ್, ಕೆ.ಆರ್.ಸುಬ್ರಮಣ್ಯ, ಮಹೇಶ್, ಎನ್.ನವೀನ್, ಭಾಗ್ಯ, ಮಂಜಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.