ADVERTISEMENT

ಕೋವಿಡ್ ಪ್ರಕರಣ ಹೆಚ್ಚಿರುವ 5 ಜಿಲ್ಲೆಗಳಲ್ಲಿ ಶಾಲೆ ತೆರೆಯಲ್ಲ: ಬಿ.ಸಿ.ನಾಗೇಶ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 14:16 IST
Last Updated 22 ಆಗಸ್ಟ್ 2021, 14:16 IST
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್   

ತುಮಕೂರು: ಕೋವಿಡ್ ದೃಢಪಡುವ ಪ್ರಮಾಣ ಶೇ 2ಕ್ಕಿಂತ ಹೆಚ್ಚಿರುವ ಐದು ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭಾನುವಾರ ತಿಳಿಸಿದರು.

9 ನೇ ತರಗತಿಯಿಂದ 12 ನೇ ತರಗತಿ ವರೆಗೆ ತರಗತಿಗಳನ್ನುಆರಂಭಿಸುತ್ತಿದ್ದು, ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಶಾಲೆಗಳು ಆರಂಭವಾಗುತ್ತಿಲ್ಲ ಎಂದರು.

ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕೋವಿಡ್ ದೃಢಪಡುವ ಪ್ರಮಾಣವನ್ನು ಆಧಾರವಾಗಿ ಇಟ್ಟುಕೊಂಡು ತಾಲ್ಲೂಕು ಹಂತದಲ್ಲೂ ಶಾಲೆಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಕೋವಿಡ್ ಮೂರನೇ ಅಲೆ ಬರುತ್ತದೆ ಎಂದು ತಜ್ಞರು ಹೇಳಿದ್ದು ನಿಜ. ಇದು ಮಹಾರಾಷ್ಟ್ರ, ಕೇರಳ ರಾಜ್ಯ ಹೊರತುಪಡಿಸಿದರೆ ಬೇರೆಡೆ ಕಂಡುಬಂದಿಲ್ಲ. ಮಕ್ಕಳ ತಜ್ಞರು ಹೇಳುವ ಪ್ರಕಾರ, ಕೊರೊನಾ ಸೋಂಕು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ತುಂಬಾ ಕಡಿಮೆ ಇದೆ. ಅದರಲ್ಲೂ ಪ್ರಾಣ ಹಾನಿಯಾಗುವುದು ತುಂಬಾ ಕಡಿಮೆ ಎಂದು ಹೇಳುತ್ತಿದ್ದಾರೆ. ತಾಂತ್ರಿಕ ಸಲಹಾ ಸಮಿತಿಯು 1ನೇ ತರಗತಿಯಿಂದಲೇ ಶಾಲೆ ಆರಂಭಿಸುವಂತೆ ಸಲಹೆ ಮಾಡಿತ್ತು. ಸದ್ಯಕ್ಕೆ 8ನೇ ತರಗತಿಯಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ಶಿಕ್ಷಕರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದ ಶಿಕ್ಷಕರು ಶಾಲೆಗೆ ಹಾಜರಾಗಲು ಅವಕಾಶ ಕೊಡುವುದಿಲ್ಲ. ರಜೆ ಬದಲಿಗೆ ಗೈರು ಹಾಜರಾತಿ ನಮೂದಿಸಲಾಗುವುದು. ಈಗಾಗಲೇ ಶೇ 95ರಷ್ಟು ಶಿಕ್ಷಕರು ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ 2 ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ. ಆನ್‌ಲೈನ್‌ನಲ್ಲೂ ತರಗತಿ ಮುಂದುವರಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.