ADVERTISEMENT

ಗುಬ್ಬಿ: ಮಕ್ಕಳನ್ನು ಸ್ವಾಗತಿಸಲು ಸಿದ್ಧವಾಗುತ್ತಿದೆ ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:41 IST
Last Updated 29 ಮೇ 2023, 13:41 IST
ನಿಟ್ಟೂರು ಹೋಬಳಿ ಎನ್ ನಂದಿಹಳ್ಳಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿರುವುದು.
ನಿಟ್ಟೂರು ಹೋಬಳಿ ಎನ್ ನಂದಿಹಳ್ಳಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿರುವುದು.   

ಗುಬ್ಬಿ: ಸರ್ಕಾರದ ನಿಯಮಾನುಸಾರ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಸೋಮವಾರದಿಂದ ಅಧಿಕೃತವಾಗಿ ಪ್ರಾರಂಭಗೊಂಡಿದೆ. ಸೋಮವಾರ ಮತ್ತು ಮಂಗಳವಾರ ಶಾಲಾ ಸ್ವಚ್ಛತೆ ಮಾಡಿಕೊಂಡು 31ರ ಬುಧವಾರ ಅಧಿಕೃತವಾಗಿ ಶಾಲೆಗಳು ಪ್ರಾರಂಭಗೊಳ್ಳುವವು.

ಸೋಮವಾರ ಎಲ್ಲಾ ಶಾಲೆಗಳ ಶಿಕ್ಷಕರು ಹಾಜರಾಗಿ ಶಾಲಾ ಕೊಠಡಿ ಹಾಗೂ ಆವರಣಗಳನ್ನು ಸ್ವಚ್ಛತೆ ಮಾಡಿ, ಮಕ್ಕಳನ್ನು ಸ್ವಾಗತಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ಮಕ್ಕಳನ್ನು ಮೊದಲ ದಿನವೇ ಶಾಲೆಗೆ ಹಾಜರಾಗುವಂತೆ ಮಾಡಲು ಪೋಷಕರಲ್ಲಿ ಜಾಗೃತಿ ಮೂಡಿಸಿ, ಯಾವ ಮಕ್ಕಳೂ ಶಾಲೆಯಿಂದ ಹೊರಗೆ ಉಳಿಯದಂತೆ ಕ್ರಮ ವಹಿಸಿರುವುದಾಗಿ ತಿಳಿದುಬಂದಿದೆ.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ, ಸೋಮವಾರ ತಾಲ್ಲೂಕಿನ ಅನೇಕ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಸಭೆ ನಡೆಸಿ ಅಗತ್ಯವಿರುವ ಸಲಹೆ ಸೂಚನೆ ನೀಡಲಾಗಿದೆ. ಕಳೆದ ಶೈಕ್ಷಣಿಕ ಸಾಲಿನ ಫಲಿತಾಂಶವನ್ನು ಪರಾಮರ್ಶಿಸಿ ಈ ವರ್ಷ ಇನ್ನೂ ಹೆಚ್ಚಿನ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಶ್ರಮ ವಹಿಸಬೇಕು. ದಾಖಲಾತಿ ಹೆಚ್ಚಳ ಮಾಡಲು ಆಂದೋಲನ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೊದಲ ದಿನದಿಂದಲೇ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಗುವುದು. ಶಾಲೆಗಳಲ್ಲಿ ಹಬ್ಬದ ವಾತಾವರಣದ ಮೂಲಕ ಮಕ್ಕಳನ್ನು ಸ್ವಾಗತಿಸುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಬಿಆರ್‌ಸಿ ಮಧುಸೂದನ್ ಮಾತನಾಡಿ, ಇದೀಗ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಯಾವುದೇ ರೋಗ ಹರಡದಂತೆ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಬಿಸಿ ಊಟ ನೀಡಲು ಅಗತ್ಯವಿರುವ ಆಹಾರ ಸಾಮಗ್ರಿ ಪೂರೈಸಲಾಗಿದೆ. ಮೊದಲ ದಿನ ಸಿಹಿ ಊಟದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.