ADVERTISEMENT

ಶಾಲಾ ವಾಹನ ನಿಯಮ ಉಲ್ಲಂಘನೆ; ಪೊಲೀಸರ ತಪಾಸಣೆ

ಚಾಲಕರು, ಶಾಲಾ ಆಡಳಿತ ಮಂಡಳಿಗೆ, ಪ್ರಾಂಶುಪಾಲರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:08 IST
Last Updated 13 ಜೂನ್ 2019, 20:08 IST
ತುಮಕೂರಿನಲ್ಲಿ ಸಂಚಾರ ಠಾಣೆ ಪೊಲೀಸರು ಶಾಲಾ ವಾಹನ ಪರಿಶೀಲನೆ ನಡೆಸಿದರು
ತುಮಕೂರಿನಲ್ಲಿ ಸಂಚಾರ ಠಾಣೆ ಪೊಲೀಸರು ಶಾಲಾ ವಾಹನ ಪರಿಶೀಲನೆ ನಡೆಸಿದರು   

ತುಮಕೂರು: ಸಮವಸ್ತ್ರ ಧರಿಸದೇ ಇರುವ ಚಾಲಕರು, ಗುರುತಿನ ಚೀಟಿಯೂ ಇಲ್ಲದೇ ಇದ್ದ ಚಾಲಕರು, ವಾಹನಗಳ ಒಳಭಾಗದಲ್ಲಿ ಬ್ಯಾಗುಗಳನ್ನು ಇಡಲು ಪ್ರತ್ಯೇಕವಾಗಿ ಕ್ಯಾರಿಯರ್ ವ್ಯವಸ್ಥೆ ಇಲ್ಲದೇ ಇರುವುದು, ವಾಹನಗಳ ಕಿಟಕಿ ಭಾಗಗಳಲ್ಲಿ ಮಕ್ಕಳು ತಲೆ ಮತ್ತು ಕೈಗಳನ್ನು ಹೊರಗೆ ಹಾಕದಂತೆ ಕಬ್ಬಿಣದ ಗ್ರಿಲ್ ವ್ಯವಸ್ಥೆ ಹಾಕಿರದೇ ಇರುವುದು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲದೇ ಇರುವುದು.

ಇವು ಮಂಗಳವಾರ ನಗರದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಬಸ್‌, ಮಾರುತಿ ಓಮಿನಿ ಕಾರುಗಳು, ಮಿನಿ ವಾಹನಗಳನ್ನು ಸಂಚಾರ ಠಾಣೆಯ ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಕಂಡು ಬಂದ ನೋಟಗಳು.

ತುರ್ತು ಸಂದರ್ಭದಲ್ಲಿ ವಾಹನದಿಂದ ಇಳಿಯಲು ತುರ್ತು ನಿರ್ಗಮನ ಬಾಗಿಲು ಇಲ್ಲದೇ ಇರುವುದು, ಅಗ್ನಿದುರಂತ, ಇನ್ನಿತರೇ ಅವಘಡಗಳು ಸಂಭವಿಸಿದಲ್ಲಿ ತುರ್ತಾಗಿ ಶಮನಗೊಳಿಸಲು ಅಗ್ನಿಶಾಮಕ ಇಲ್ಲದೇ ಇರುವುದು, ಬಸ್ಸಿನಲ್ಲಿ ಸಿಸಿ ಟಿ.ವಿ ಕ್ಯಾಮರಾ ಇಲ್ಲದಿರುವುದು, ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುವ ಆಯಾಗಳು ಗುರುತಿನ ಚೀಟಿ ಹೊಂದಿಲ್ಲದೇ ಇರುವುದು, ಎಷ್ಟೋ ವಾಹನಗಳ ಮೇಲೆ ಶಾಲೆಯ ಹೆಸರು, ದೂರವಾಣಿ ಸಂಖ್ಯೆ ಇಲ್ಲದೇ ಇರುವುದು, ಶಾಲಾ ವಾಹನಗಳಿಗೆ ನಿಯಮಾವಳಿ ಪ್ರಕಾರ ಹಳದಿ ಬಣ್ಣ ಹೊಂದಿಲ್ಲದಿರುವುದು, ನಿಗದಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ಸಾಗಿಸುವುದು, ಶಾಲಾ ಬಸ್ಸಿನ ಮೇಲೆ ‘ಆನ್ ಸ್ಕೂಲ್ ಡ್ಯೂಟಿ’ ಎಂದು ಬೋರ್ಡ್ ಹಾಕಿಲ್ಲದೇ ಇರುವ ಲೋಪಗಳು ಕಂಡು ಬಂದವು ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಎಲ್ಲ ಸೂಚನೆಗಳನ್ನು ಶಾಲೆಯ ಆಡಳಿತ ಮಂಡಳಿ ಮತ್ತು ಚಾಲಕರು ಪಾಲಿಸಬೇಕು. ಅದನ್ನು ಪಾಲಿಸದೇ ಇರುವ ಚಾಲಕರಿಗೆ ತಿಳಿವಳಿಕೆಯನ್ನು ಸ್ಥಳದಲ್ಲಿಯೇ ನೀಡಲಾಯಿತು ಎಂದು ತಿಳಿಸಲಾಗಿದೆ.

ನಗರದಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪ್ರಾಂಶುಪಾಲರಿಗೆ ಮತ್ತು ಆಡಳಿತ ಮಂಡಳಿಯವರಿಗೆ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಲಿಖಿತ ರೂಪದಲ್ಲಿ ನೋಟಿಸ್ ನೀಡಲಾಗಿದೆ. ಪೋಷಕರೂ ಸಹ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.