ರೇಷ್ಮೆ ಸಾಕಣೆಯಲ್ಲಿ ನಿರತ ತುರುವೇಕೆರೆ ತಾಲ್ಲೂಕಿನ ನೀರಗುಂದದ ರೈತ ರವಿಕುಮಾರ್ ಕುಟುಂಬ
ತುರುವೇಕೆರೆ: ತಾಲ್ಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಗುಂದ ಗ್ರಾಮದ ರೈತ ರವಿಕುಮಾರ್ ರೇಷ್ಮೆ ಸಾಕಣೆ ಕೃಷಿಯಲ್ಲಿ ಕೈತುಂಬ ಆದಾಯ ಗಳಿಸುತ್ತಿದ್ದಾರೆ.
ರೇಷ್ಮೆ ಕೃಷಿಯಲ್ಲಿ ಕಡಿಮೆ ಬಂಡವಾಳ ಹಾಕಿ ಮನೆ ಮಂದಿಯೇ ದುಡಿದು ಹೆಚ್ಚು ಆದಾಯ ಗಳಿಸಿ ಮಾದರಿಯಾಗಿದ್ದಾರೆ.
ರೈತ ರವಿಕುಮಾರ್‌ಗೆ ತಂದೆಯಿಂದ ಬಂದ ಜಮೀನಿನಲ್ಲಿ 40 ತೆಂಗಿನ ಸಸಿಗಳಿರುವ ತೋಟವಿದೆ. ಉಪಕಸುಬಿಗೆ ಯಾವುದೇ ಆಧಾರವಿಲ್ಲ. ಹಾಗಾಗಿ ಅಲ್ಫಾವಧಿಯಲ್ಲಿ ಕಡಿಮೆ ಬಂಡವಾಳ, ದೀರ್ಘಕಾಲದವರೆಗೆ ಬೆಳೆ ತೆಗೆಯುವ ಬಗ್ಗೆ ಚಿಂತನೆ ನಡೆಸಿದಾಗ ರೇಷ್ಮೆ ಕೃಷಿ ಬಗ್ಗೆ ಆಸಕ್ತಿ ಮೂಡಿತು. ಆಗ ರೇಷ್ಮೆ ಇಲಾಖೆಯ ಜಯರಾಂ ಅವರನ್ನು ಭೇಟಿಯಾಗಿ ಈ ಕೃಷಿ ಬಗ್ಗೆ ಮಾಹಿತಿ ಕಲೆಹಾಕಿದರು.
ಆರ್ಥಿಕ ನೆರವು ಹೇಗೆ: ಖಾಲಿ ಜಮೀನಿಗೆ ಕಡ್ಡಿ ನೆಡಲು ನರೇಗಾ ಯೋಜನೆಯಡಿ ₹49,896 ಕೂಲಿ ಪಡೆದಿದ್ದಾರೆ. ಜೊತೆಗೆ ರೇಷ್ಮೆ ಇಲಾಖೆಯ ₹2.40 ಲಕ್ಷ ಅನುದಾನದಿಂದ ರೇಷ್ಮೆ ಮನೆ ಕಟ್ಟಿಸಿದ್ದಾರೆ. ಇನ್ನಿತರೆ ಯಾವುದೇ ಬೆಳೆಯಾಗಿದ್ದರೂ ಇಷ್ಟೊಂದು ಸಹಾಯಧನ, ಮಾರ್ಗದರ್ಶನ ಸಿಗುತ್ತಿರಲಿಲ್ಲ ಎನ್ನುತ್ತಾರೆ ರವಿಕುಮಾರ್.
ಸೊಪ್ಪು ಬೆಳೆಯುವ ವಿಧಾನ: ರೇಷ್ಮೆ ಹುಳುವಿಗಾಗಿ ಎರಡು ಎಕರೆಯಲ್ಲಿ ಹಿಪ್ಪುನೇರಳೆ ಹಾಕಿದ್ದಾರೆ. ತೋಟದ ಬದುಗಳಲ್ಲೂ ಗುಣಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಕೊಟ್ಟಿಗೆ ಗೊಬ್ಬರ ಯಥೇಚ್ಛವಾಗಿ ನೀಡಿ ರಾಸಾಯನಿಕ ಗೊಬ್ಬರ ನೀಡದೆ ಅಣುಜೀವಿ ಗೊಬ್ಬರ ನೀಡಿ ಇಲಾಖೆ ಕೊಡುವ ಔಷಧಿಗಳನ್ನು ಸಿಂಪಡನೆ ಮಾಡಿ ಹೆಚ್ಚಿನ ಇಳುವರಿ ತರುತ್ತಿದ್ದಾರೆ. ಪ್ರತಿ ಗಿಡಗಳನ್ನು ಕಟಾವ್ ಮಾಡುವ ಕಾರಣ ರೆಂಬೆ– ಕೊಂಬೆಗಳು ಹೆಚ್ಚಿ ಸೊಪ್ಪು ಪುಷ್ಕಳವಾಗಿ ಬೆಳೆಯುತ್ತದೆ. ಪ್ರತಿ ಗಿಡಕ್ಕೆ ನೀರು ಹಾಕಲು ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ಡ್ರಿಪ್ ಪೈಪ್‌ಗಳನ್ನು ಸಹ ನೀಡಲಾಗುತ್ತಿದೆ.
ಯಾವುದೇ ಕೂಲಿಕಾರರ ಬಳಸಿಕೊಳ್ಳದೆ ರವಿಕುಮಾರ್ ಅವರು ತನ್ನ ಹೆಂಡತಿ, ಮಗ ಇಡೀ ಕುಟುಂಬವೇ ಸೇರಿ ರೇಷ್ಮೆ ಕೃಷಿ ಮಾಡುತ್ತಾರೆ.
ಹುಳು ಸಾಕುವ ವಿಧಾನ: ಹುಳು 4ನೇ ದಿನ ಜ್ವರದಿಂದ ಎದ್ದಾಗ ಚಂದ್ರಿಕೆ ಹಾಕುವವರೆಗೂ ಎಚ್ಚರ ವಹಿಸಿದರೆ ಗೂಡು ಉತ್ತಮವಾಗಿ ಬರುತ್ತದೆ. ಮೇವು ಕೊಡುವ ವಿಧಾನದಲ್ಲೂ ಜಾಗೃತೆ ತೋರಬೇಕು. ಬೆಳಿಗ್ಗೆ 9 ಗಂಟೆ ಒಳಗೆ ಇಬ್ಬನಿ ನೋಡಿಕೊಂಡು ಮೇವು ಕೊಡಬೇಕು. 4 ರಿಂದ 5 ಗಂಟೆ ಆದ ಮೇಲೆ ಹುಳುಗಳು ಮೇವು ತಿಂದು ಖಾಲಿಯಾಗಿದ್ದರೆ, ಮತ್ತೊಮ್ಮೆ ಸೊಪ್ಪು ಹಾಕಿ ಮಕ್ಕಳಂತೆ ಸಲಹುತ್ತೇವೆ ಎನ್ನುತ್ತಾರೆ ಅವರು.
ಸುಲಭ ಮಾರಾಟ: ಮಾರುಕಟ್ಟೆ ಬಗ್ಗೆ ಇಲಾಖೆ ಅಧಿಕಾರಿಗಳೇ ಸಲಹೆ ನೀಡುತ್ತಾರೆ. ಪ್ರಾರಂಭದಲ್ಲಿ ಕಡಿಮೆ ಇಳುವರಿ ಇರುವ ಕಾರಣ 25 ಮೊಟ್ಟೆ ಮೇಯಿಸಲಾಗುತಿತ್ತು. ಈಗ ಜಮೀನಿನ ವಿಸ್ತೀರ್ಣ ಹೆಚ್ಚಾಗಿದೆ. ಬೇರೆ ಕಡೆ ಒಂದು ಎಕರೆ ಜಮೀನಿನಲ್ಲಿ ಸೊಪ್ಪು ಬೆಳೆಯುವ ಕಾರಣ 150 ಮೊಟ್ಟೆ ಬೆಳೆಯುತ್ತಿದ್ದಾರೆ. ಈವರೆಗೆ ರಾಮನಗರ ಮಾರುಕಟ್ಟೆಯಲ್ಲಿ ₹500, ₹600, ₹700ರ ವರೆಗೆ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಸಿಕ್ಕಿದೆ. ಕಳೆದ ತಿಂಗಳು ರೇಷ್ಮೆ ಗೂಡಿಗೆ ರಾಮನಗರ ಮಾರುಕಟ್ಟೆಯಲ್ಲಿ 115 ಕೆಜಿ ತೂಕಕ್ಕೆ ₹65 ಸಾವಿರದಿಂದ ₹70 ಸಾವಿರ ತನಕ ಆದಾಯ ಸಿಕ್ಕಿದೆ ಎಂದು ರೈತ ಖುಷಿ ವ್ಯಕ್ತಪಡಿಸಿದರು.
ಸಾಗಣೆ ಹೇಗೆ: ಏಳೆಂಟು ರೇಷ್ಮೆ ರೈತರು ಸೇರಿ ಒಂದು ವಾಹನ ಬಾಡಿಗೆ ಮಾಡಿ ರಾಮನಗರಕ್ಕೆ ತೆರಳುತ್ತೇವೆ. ಅಧಿಕಾರಿಗಳೇ ಬಂದು ಗೂಡು ನೋಡಿ ಬೆಲೆ ನಿಗದಿ ಮಾಡುತ್ತಾರೆ. ಒಳ್ಳೆ ಗೂಡಿಗೆ ಉತ್ತಮ ಬೆಲೆ ಸಿಗುತ್ತದೆ. ನಂತರ ಹರಾಜು ಹಾಕಲಾಗುತ್ತದೆ. ನಮ್ಮ ಕಣ್ಣೆದುರಿಗೆ ಬಿಲ್ ಬರುತ್ತೆ. ಎರಡು ದಿನಗಳಲ್ಲಿ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಹೇಳಿದರು.
ರವಿಕುಮಾರ್
ರೇಷ್ಮೆ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು. ಈ ಕೃಷಿಯಿಂದ ಆರ್ಥಿಕ ಚೇತರಿಕೆ ಬಂದಿದೆ. ತೋಟದಲ್ಲಿ ಹೊಸ ಮನೆ ಕಟ್ಟಿಕೊಂಡಿದ್ದೇನೆ. ಮಕ್ಕಳ ವಿದ್ಯಾಭ್ಯಾಸ ಕುಟುಂಬದ ನಿರ್ವಹಣೆಗೆ ನೆರವಾಗಿದೆ.ರವಿಕುಮಾರ್ ರೈತ
222 ರೇಷ್ಮೆ ಬೆಳೆಯುವ ರೈತರಿದ್ದಾರೆ. 2024-25ನೇ ಸಾಲಿನಲ್ಲಿ 96925 ರೇಷ್ಮೆ ಮೊಟ್ಟೆ ಮತ್ತು 72166 ಕೆ.ಜಿ ರೇಷ್ಮೆ ಗೂಡು ಉತ್ತಾದನೆಯಾಗಿದೆ. ಈಗೀಗ ರೇಷ್ಮೆ ಕೃಷಿ ಕಡೆ ಹೆಚ್ಚಿನ ರೈತರು ಆಸಕ್ತರಾಗಿದ್ದಾರೆ.ಜಯರಾಂ ರೇಷ್ಮೆ ವಿಸ್ತೀರ್ಣ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.