ತುಮಕೂರು: ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದ್ದು ಕಳೆದ ಮೂರು ವರ್ಷದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 1,579 ಮಕ್ಕಳು ಪತ್ತೆಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 4,199 ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಕೇಂದ್ರದಲ್ಲಿ ಪ್ರತಿ ತಿಂಗಳು ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎತ್ತರ, ತೂಕ ಪರಿಶೀಲಿಸಲಾಗುತ್ತದೆ. ತೂಕ ಕಡಿಮೆ ಇರುವ ಮತ್ತು ಬೆಳವಣಿಗೆ ಕುಂಠಿತ ಇರುವ ಮಕ್ಕಳನ್ನು ಗುರುತಿಸಿ ಆರೋಗ್ಯ ಸುಧಾರಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ.
2023–24ನೇ ಸಾಲಿನಲ್ಲಿ 1,27,660 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಅದರಲ್ಲಿ 899 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದಿತ್ತು. 2024–25ನೇ ಸಾಲಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 235 ಮಕ್ಕಳನ್ನು ಗುರುತಿಸಲಾಗಿದೆ. ಇದರಲ್ಲಿ ಕೊರಟಗೆರೆ ತಾಲ್ಲೂಕಿನ 32, ಮಧುಗಿರಿ ತಾಲ್ಲೂಕಿನ 24 ಮಕ್ಕಳಿದ್ದಾರೆ. ಹಿಂದುಳಿದ ಪ್ರದೇಶಗಳಾದ ಕೊರಟಗೆರೆ, ಮಧುಗಿರಿ, ಪಾವಗಡ ಭಾಗದ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುತ್ತಿರುವುದು ತಪಾಸಣೆ ಸಮಯಲ್ಲಿ ಪತ್ತೆಯಾಗಿದೆ.
ಮಕ್ಕಳ ಅಪೌಷ್ಟಿಕತೆ ನೀಗಿಸಲು ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಅಂಗನವಾಡಿಗಳಲ್ಲಿ ಮೊಟ್ಟೆ ಸೇರಿದಂತೆ ಇತರೆ ಪೌಷ್ಟಿಕಾಂಶಯುಕ್ತ ಆಹಾರ ವಿತರಿಸಲಾಗುತ್ತಿದೆ. ಮಕ್ಕಳು ಕೇಂದ್ರಗಳಲ್ಲಿ ಒಂದೊತ್ತಿನ ಊಟ ಮಾಡಿ ಮನೆಗೆ ತೆರಳುತ್ತಾರೆ. ಮನೆಯಲ್ಲಿ ಅವರ ಆರೋಗ್ಯ ಸುಧಾರಣೆಗೆ ಬೇಕಾದ ಪೌಷ್ಟಿಕ ಆಹಾರ ನೀಡುತ್ತಿಲ್ಲ. ಪೋಷಕರಲ್ಲಿ ಅರಿವಿನ ಕೊರತೆಯಿಂದ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಪೋಷಣ್ ಟ್ರ್ಯಾಕರ್: ಮಕ್ಕಳ ಆರೋಗ್ಯದ ಕುರಿತು ಅಂಗನವಾಡಿ ಕೇಂದ್ರದ ಸಿಬ್ಬಂದಿ ‘ಪೋಷಣ್ ಟ್ರ್ಯಾಕರ್’ ಆ್ಯಪ್‌ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ. ಇದರಿಂದ ಅಧಿಕಾರಿಗಳಿಗೆ ತಕ್ಷಣಕ್ಕೆ ಮಕ್ಕಳ ವಿವರ ಲಭ್ಯವಾಗುತ್ತದೆ. ಈ ಆ್ಯಪ್ ಅನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದೆ.
ಜಿಲ್ಲೆಯ ಶೇ 70ರಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಆ್ಯಪ್ ಬಳಸಲಾಗುತ್ತಿದೆ. ಅಂಗನವಾಡಿಯಲ್ಲಿ ಮಕ್ಕಳು ಮತ್ತು ಸಿಬ್ಬಂದಿ ಹಾಜರಾತಿ, ಮಕ್ಕಳಿಗೆ ವಿತರಿಸುತ್ತಿರುವ ಆಹಾರ, ಕೇಂದ್ರದ ಮೂಲ ಸೌಕರ್ಯಗಳ ಬಗ್ಗೆಯೂ ಆ್ಯಪ್‌ನಲ್ಲಿ ಉಲ್ಲೇಖಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಹಾರ ಗುಣಮಟ್ಟದ ಮಾಹಿತಿ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
‘ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಅಂಗನವಾಡಿ ಕಾರ್ಯಕರ್ತೆಯರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪೋಷಕರು ಕೈಜೋಡಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ತೊಂದರೆಯಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಪುನಶ್ಚೇತನ ಕೇಂದ್ರಕ್ಕೆ ಬರುತ್ತಿಲ್ಲ
ಅಪೌಷ್ಟಿಕತೆಯಿಂದ ಬಳಲುತ್ತಿರುವ ಕಡಿಮೆ ತೂಕ ಇರುವ ಮಕ್ಕಳ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ಆರಂಭಿಸಲಾಗಿದೆ. ಕೇಂದ್ರಕ್ಕೆ ಮಕ್ಕಳನ್ನು ಕರೆತರಲು ಪೋಷಕರು ಆಸಕ್ತಿ ತೋರುತ್ತಿಲ್ಲ. ಮಕ್ಕಳ ಜತೆಗೆ ಪೋಷಕರು ಕನಿಷ್ಠ 15 ದಿನ ಕೇಂದ್ರದಲ್ಲಿ ಇರಬೇಕು. ಇದಕ್ಕೆ ಪೋಷಕರು ಒಪ್ಪುತ್ತಿಲ್ಲ. ನಾಲ್ಕು ದಿನಕ್ಕೆ ವಾಪಸ್ ಹೋಗುತ್ತಿದ್ದಾರೆ. ಮಗುವಿನ ಜತೆ ಉಳಿದುಕೊಳ್ಳುವ ತಾಯಿ ಅಥವಾ ತಂದೆಗೆ ನರೇಗಾ ಯೋಜನೆಯಡಿ ದಿನದ ಕೂಲಿ ನೀಡಲಾಗುತ್ತದೆ. ಊಟ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೂ ಪೋಷಕರು ಕೇಂದ್ರದಲ್ಲಿ ಉಳಿಯುತ್ತಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.