ADVERTISEMENT

ಲೈಂಗಿಕ ದೌರ್ಜನ್ಯ: ಚಿಕ್ಕಮ್ಮ, ಅಜ್ಜಿಗೂ ಶಿಕ್ಷೆ

ವ್ಯಕ್ತಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ; ಕುಮ್ಮಕ್ಕು ನೀಡಿದವರೂ ಅಪರಾಧಿಗಳು

​ಪ್ರಜಾವಾಣಿ ವಾರ್ತೆ
Published 17 ಮೇ 2025, 5:53 IST
Last Updated 17 ಮೇ 2025, 5:53 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿ ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದ ಚಿಕ್ಕಮ್ಮ, ಅಜ್ಜಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪೋಕ್ಸೊ ನ್ಯಾಯಾಲಯ ಆದೇಶಿಸಿದೆ.

ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ಅರುಣ್ ಕುಮಾರ್, ಬಾಲಕಿ ಚಿಕ್ಕಮ್ಮ ರತ್ನಮ್ಮ, ಅಜ್ಜಿ ಗಂಗಮ್ಮನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಬಾಲಕಿ ತಂದೆ ಎರಡನೇ ಮದುವೆಯಾಗಿದ್ದು, ಆಕೆ ಚಿಕ್ಕಮ್ಮ ರತ್ನಮ್ಮ, ಅಜ್ಜಿ ಗಂಗಮ್ಮ ಸೇರಿಕೊಂಡು ಲೈಂಗಿಕ ದೌರ್ಜನ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೂಲಿ ಕೆಲಸಕ್ಕೆ ಹೋಗೋಣವೆಂದು ಬಾಲಕಿಯನ್ನು ಮಡಕಶಿರಾಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ವಾರಂಗಲ್ ಬಳಿಗೆ ಕರೆದೊಯ್ದು ಶೆಡ್‌ನಲ್ಲಿ ಕೂಡಿಹಾಕಿದ್ದರು.

ADVERTISEMENT

ಬಾಲಕಿ ಇದ್ದ ಶೆಡ್‌ಗೆ ಅರುಣ್ ಕುಮಾರ್‌ ಎಂಬಾತನನ್ನು ಆಕೆ ಚಿಕ್ಕಮ್ಮ, ಅಜ್ಜಿ ಕಳುಹಿಸಿದ್ದರು. ಕೆಲವು ದಿನಗಳ ಕಾಲ ಅಲ್ಲೇ ಇಟ್ಟುಕೊಂಡು, ಹಲವು ಬಾರಿ ಆತ ಲೈಂಗಿಕ ದೌರ್ಜನ್ಯ ನಡೆಸಿದ್ದ. ವಿಷಯ ತಿಳಿದ ಬಾಲಕಿ ತಾಯಿ 2021 ಅಕ್ಟೋಬರ್ 29ರಂದು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಲಕ್ಷ್ಮಿಕಾಂತ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರು, ಆರೋಪ ಸಾಬೀತಾಗಿದ್ದರಿಂದ ಮೂವರಿಗೂ ಜೀವಾವಧಿ ಶಿಕ್ಷೆ, ಅರುಣ್ ಕುಮಾರ್‌ಗೆ ₹1.50 ಲಕ್ಷ ದಂಡ, ಇನ್ನಿಬ್ಬರಿಗೆ ತಲಾ ₹1 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ₹10 ಲಕ್ಷ ಸೇರಿ ಒಟ್ಟು ₹13.50 ಲಕ್ಷ ಪರಿಹಾರಕ್ಕೆ ಸೂಚಿಸಿದ್ದಾರೆ. ಬಾಲಕಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್.ಆಶಾ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.