ADVERTISEMENT

ಕೊರಟಗೆರೆ: ಕರ್ಫ್ಯೂ ನಡುವೆ ಭರ್ಜರಿ ಕುರಿ ಸಂತೆ

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 19:24 IST
Last Updated 8 ಜನವರಿ 2022, 19:24 IST
ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಕುರಿ, ಮೇಕೆ ಸಂತೆಯಲ್ಲಿ ಸೇರಿದ್ದ ಜನ
ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಕುರಿ, ಮೇಕೆ ಸಂತೆಯಲ್ಲಿ ಸೇರಿದ್ದ ಜನ   

ಕೊರಟಗೆರೆ (ತುಮಕೂರು): ರಾಜ್ಯದಲ್ಲಿಯೇ ಅತಿ ಹೆಚ್ಚು ಕುರಿ, ಮೇಕೆ ವಹಿವಾಟು ನಡೆಯುವ ತಾಲ್ಲೂಕಿನ ಅಕ್ಕಿರಾಂಪುರ ಸಂತೆಯಲ್ಲಿ ಶನಿವಾರ ವಾರಾಂತ್ಯ ಕರ್ಫ್ಯೂ ನಡುವೆಯೂ ಭರ್ಜರಿ ವಹಿವಾಟು ನಡೆಯಿತು.

ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ನೂರಾರು ಜನರು ಗುಂಪು, ಗುಂಪಾಗಿ ಸಂತೆಯಲ್ಲಿ ಕುರಿ, ಮೇಕೆ ಮಾರಾಟ ಹಾಗೂ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು.

ಅಕ್ಕಿರಾಂಪುರದಲ್ಲಿ ಪ್ರತಿ ಶನಿವಾರಕುರಿ, ಮೇಕೆ ಸಂತೆ ನಡೆಯುತ್ತದೆ.ಸಂತೆ ಮೈದಾನಕ್ಕೆ ನಿರ್ಬಂಧ ಹೇರಿದ್ದರಿಂದ ಅಕ್ಕಿರಾಂಪುರ– ಹೊಳವನಹಳ್ಳಿ ಮುಖ್ಯ ರಸ್ತೆಯಲ್ಲೆ ರೈತರು ಹಾಗೂ ಗ್ರಾಹಕರು ವಹಿವಾಟು ನಡೆಸಿದರು.

ADVERTISEMENT

ಮುಂದಿನ ವಾರದ ಸಂಕ್ರಾಂತಿ ಹಿನ್ನೆಲೆಯಲ್ಲಿ ವ್ಯಾಪಾರ ಜೋರಾಗಿ ನಡೆಯಬೇಕಿತ್ತು. ಕರ್ಫ್ಯೂ ಕಾರಣ ವಹಿವಾಟು ತುಸು ಮಂಕಾಗಿತ್ತು. ಯಾವುದೇ ಹಬ್ಬಕ್ಕೆ ಮೊದಲು ನಡೆಯುವ ಸಂತೆಯಲ್ಲಿ ಮರಿಗಳ ವ್ಯಾಪಾರ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ.

‘ಏಕಾಏಕಿ ಲಾಕ್‌ಡೌನ್, ಕರ್ಫ್ಯೂ ಹೇರಿದರೆ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಎರಡು ವರ್ಷಗಳಿಂದ ಕೋವಿಡ್‌ ನಿರ್ಬಂಧ, ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಹೈರಾಣಾಗಿದ್ದೇವೆ. ಅನೇಕ ಕುರಿ, ಮೇಕೆಗಳು ರೋಗದಿಂದ ಸತ್ತವು. ಈಗ ಇರುವ ಮರಿಗಳನ್ನು ಮಾರಿ ಜೀವನ ಸಾಗಿಸೋಣ ಎಂದರೆ ಕರ್ಫ್ಯೂ ಅಡ್ಡ ಬಂದಿದೆ. ಇದರಿಂದ ಮರಿಗಳಿಗೆ ಬೇಡಿಕೆ ಇಲ್ಲವಾಗಿದೆ. ಗ್ರಾಹಕರು ಕೇಳಿದ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ’ ಎನ್ನುತ್ತಾರೆ ರೈತರಾದ ನಾಗರೆಡ್ಡಿ ಮತ್ತುಚಂದ್ರಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.