ಗುಬ್ಬಿ: ತಾಲ್ಲೂಕಿನಲ್ಲಿ ನೀರಾವರಿ ಸೌಕರ್ಯ ಉತ್ತಮವಾಗಿರುವುದರಿಂದ ಬೇಸಿಗೆ ಆರಂಭವಾಗುತ್ತಿದ್ದಂತೆ ಶಿರಾ ಭಾಗದ ಕುರಿಗಾಹಿಗಳು ತಾಲ್ಲೂಕಿನ ವಿವಿಧೆಡೆಗೆ ಬರುತ್ತಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಊರಿಗೆ ಮರಳುತ್ತಾರೆ. ಈ ರೂಢಿ ಅನೇಕ ವರ್ಷಗಳಿಂದಲೂ ಇದೆ.
ತಾಲ್ಲೂಕಿನಲ್ಲಿ ತೆಂಗು ಮತ್ತು ಅಡಿಕೆ ತೋಟಗಳು ಹೆಚ್ಚಾಗಿ ಇರುವುದರಿಂದ ಕುರಿ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ರೈತರು ಗೊಬ್ಬರಕ್ಕಾಗಿ ತೋಟಗಳಿಗೆ ಕುರಿ ಮಂದೆಯನ್ನು ಕರೆಸುತ್ತಾರೆ. ಕುರಿಗಳ ಲೆಕ್ಕಾಚಾರದಲ್ಲಿ ದಿನವೊಂದಕ್ಕೆ ಒಂದು ಕುರಿಗೆ ₹1ರಿಂದ ₹2 ದರ ನಿಗದಿಪಡಿಸುತ್ತಾರೆ.
ಹಲವು ಕುರಿಗಾಹಿಗಳು ಕುಟುಂಬ ಸಮೇತರಾಗಿ ಬಂದು ನಾಲ್ಕೈದು ತಿಂಗಳು ಈ ಭಾಗದಲ್ಲಿಯೇ ನೆಲೆಸುತ್ತಾರೆ. ಮಂದೆ ಹಾಕಿಸುವವರೇ ಕುರಿಗಾಹಿಗಳಿಗೆ ಅಗತ್ಯ ದವಸ, ಧಾನ್ಯ ಒದಗಿಸುತ್ತಾರೆ.
ಮಂದೆ ಹಾಕಿಸುವುದರಿಂದ ರೈತರಿಗೆ ಗೊಬ್ಬರದ ಅವಶ್ಯಕತೆ ಕಡಿಮೆಯಾದರೆ, ಕುರಿಗಾಹಿಗಳಿಗೆ ಹಣದ ಅವಶ್ಯಕತೆ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆ ಲಾಭದಾಯಕವಾಗುತ್ತಿರುವುದರಿಂದ ವಿದ್ಯಾವಂತ ಯುವಕರೂ ಕುರಿ ಸಾಕಾಣಿಕೆಯತ್ತ ಒಲವು ತೋರಿಸುತ್ತಿದ್ದಾರೆ
ಬಯಲುಸೀಮೆ ಪ್ರದೇಶದಿಂದ ಬರುವ ಕುರಿಗಾಹಿಗಳು ಮಳೆಗಾಲದಲ್ಲಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಮಳೆಗಾಲ ಅಂತ್ಯವಾಗುತ್ತಿದ್ದಂತೆ ನೀರಿನ ಅನುಕೂಲ ಇರುವೆಡೆ ವಲಸೆ ಹೋಗುತ್ತಾರೆ.
‘ನಮ್ಮ ಭಾಗದಲ್ಲಿ ನೀರಿನ ಕೊರತೆ ಇದೆ. ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇಲ್ಲ .ಈ ಭಾಗದಲ್ಲಿ ತೋಟ ಹೆಚ್ಚಾಗಿರುವುದರಿಂದ ಗೊಬ್ಬರಕ್ಕೆ ಬೇಡಿಕೆ ಇದೆ. ಹಾಗಾಗಿ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಈ ಭಾಗಕ್ಕೆ ಬಂದು ಜೀವನ ಸಾಗಿಸುತ್ತೇವೆ. ತೋಟದ ಮಾಲೀಕರು ನೀಡುವ ಹಣ ಹಾಗೂ ಕುರಿ ಮರಿಗಳನ್ನು ಮಾರಿ ಹಣ ಸಂಗ್ರಹಿಸುತ್ತೇವೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸ್ವಗ್ರಾಮಗಳಿಗೆ ತೆರಳಿ, ಕೃಷಿ ಚಟುವಟಿಕೆ ಜೊತೆಗೆ ಕುರಿ ಮೇಯಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಕುರಿಗಾಹಿ ಚಿತ್ತಯ್ಯ.
ಪೂರ್ವಜರ ಕಾಲದಿಂದಲೂ ಕುರಿ ಸಾಕಾಣಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದೇವೆ. ನಾವು ವಿದ್ಯಾವಂತರಾಗಿ ಬೇರೆ ಕೆಲಸ ಮಾಡುವುದಕ್ಕಿಂತಲೂ ಕುರಿ ಸಾಕಾಣಿಕೆಯಲ್ಲಿ ಉತ್ತಮ ಆದಾಯ ಕಾಣಲು ಸಾಧ್ಯವಾಗುತ್ತಿದೆ. ಆದ್ದರಿಂದ ಓದಿದ್ದರೂ ಕುರಿ ಮೇಯಿಸಲು ಹಿಂಜರಿಯುವುದಿಲ್ಲ ಎನ್ನುತ್ತಾರೆ ಕುರಿಗಾಹಿ ಮಂಜುನಾಥ್.
ಇತ್ತೀಚಿನ ದಿನಗಳಲ್ಲಿ ಜಾನುವಾರು ಸಾಕಾಣಿಕೆ ಕಡಿಮೆಯಾಗಿರುವುದರಿಂದ ಗೊಬ್ಬರಕ್ಕಾಗಿ ಅನಿವಾರ್ಯವಾಗಿ ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಿದೆ. ಶಿರಾ ಭಾಗದ ಕುರಿಗಾಹಿಗಳು ಬರುವುದರಿಂದ ಕುರಿಮಂದೆ ಹಾಕಿ ಗೊಬ್ಬರ ಪಡೆಯುತ್ತೇವೆ.ಹರ್ಷ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.