ADVERTISEMENT

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ; ಶಿರಾ ಕ್ಷೇತ್ರದ ಶಾಸಕರು ಯಾರು?

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 12:45 IST
Last Updated 16 ಜನವರಿ 2019, 12:45 IST
ಶಿರಾದ ಪ್ರವಾಸಿ ಮಂದಿರದ ವೃತ್ತದಲ್ಲಿರುವ ಬಸ್ ಶೆಲ್ಟರ್ ಗೆ ಆಳವಡಿಸಿರುವ ಡಿಜಿಟಲ್ ಬೋರ್ಡ್ ನಲ್ಲಿ ಟಿ.ಬಿ.ಜಯಚಂದ್ರ ಮಾಜಿ ಶಾಸಕರಾದರೂ ಸಹ ಶಾಸಕ ಟಿ.ಬಿ.ಜಯಚಂದ್ರ ಎಂದು ಬರುತ್ತಿರುವುದು.
ಶಿರಾದ ಪ್ರವಾಸಿ ಮಂದಿರದ ವೃತ್ತದಲ್ಲಿರುವ ಬಸ್ ಶೆಲ್ಟರ್ ಗೆ ಆಳವಡಿಸಿರುವ ಡಿಜಿಟಲ್ ಬೋರ್ಡ್ ನಲ್ಲಿ ಟಿ.ಬಿ.ಜಯಚಂದ್ರ ಮಾಜಿ ಶಾಸಕರಾದರೂ ಸಹ ಶಾಸಕ ಟಿ.ಬಿ.ಜಯಚಂದ್ರ ಎಂದು ಬರುತ್ತಿರುವುದು.   

ಶಿರಾ: ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರು ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಬಿ.ಸತ್ಯನಾರಾಯಣ ಶಾಸಕರಾಗಿ ಆಯ್ಕೆಯಾಗಿ 8 ತಿಂಗಳು ಕಳೆದು, ಟಿ.ಬಿ.ಜಯಚಂದ್ರ ಮಾಜಿ ಶಾಸಕರಾದರೂ ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿರುವ ಬಸ್ ಶೆಲ್ಟರ್‌ಗೆ ಆಳವಡಿಸಿರುವ ಡಿಜಿಟಲ್ ಬೋರ್ಡ್‌ನಲ್ಲಿ ‘ಶಾಸಕ ಟಿ.ಬಿ.ಜಯಚಂದ್ರ’ ಎಂದು ತೋರಿಸುತ್ತಿರುಗವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದೆ.

8 ತಿಂಗಳು ಕಳೆದರೂ ಅಧಿಕಾರಿಗಳಿಗೆ ಇನ್ನು ಶಾಸಕರು ಯಾರು ಎನ್ನುವುದು ತಿಳಿದಿಲ್ಲವೇ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಏಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.

ADVERTISEMENT

ಮಂಗಳವಾರ ಸಂಜೆ ಈ ರಸ್ತೆಯಲ್ಲಿ ಬಂದ ಶಾಸಕ ಬಿ.ಸತ್ಯನಾರಾಯಣ ಡಿಜಿಟಲ್ ಬೋರ್ಡ್‌ ಅನ್ನು ಗಮನಿಸಿ ಕೋಪಗೊಂಡ ಅವರು, ‘ಕ್ಷೇತ್ರದ ಜನ ಮತ ನೀಡಿ ಸೇವೆ ಮಾಡಲು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಅಧಿಕಾರಿಗಳಿಗೆ ಇನ್ನು ಸಹ ಶಾಸಕರು ಯಾರು ಎನ್ನುವುದು ತಿಳಿದಿಲ್ಲವೇ’ ಎಂದು ನಗರಸಭೆ ಪೌರಾಯುಕ್ತ ಗಂಗಣ್ಣ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇದೇ ವೇಳೆಗೆ ಸ್ಥಳಕ್ಕೆ ಬಂದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ‘ಶಾಸಕರ ಹೆಸರು ಬದಲಿಸುವಂತೆ 6 ತಿಂಗಳ ಹಿಂದೆಯೇ ನಗರಸಭೆಗೆ ಅರ್ಜಿ ನೀಡಿದ್ದರೂ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ’ ಎಂದು ಸತ್ಯನಾರಾಯಣ ಅವರಿಗೆ ಹೇಳಿದರು.

ಶಾಸಕರು ಕಾರು ನಿಂತಿರುವುದನ್ನು ಗಮನಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಮಾಯಿಸಿ ಶಾಸಕರಿಗೆ ನಗರಸಭೆ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಯನ್ನೇ ಸುರಿಸಿದರು.

ಪೌರಾಯುಕ್ತರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು ಸಹ ಬೋರ್ಡ್‌ನಲ್ಲಿ ಶಾಸಕರ ಹೆಸರು ಬದಲಾವಣೆಯಾಗದೆ ಬುಧವಾರ ಮಧ್ಯಾಹ್ನದವರೆಗೂ ಪ್ರದರ್ಶನಗೊಳ್ಳುತ್ತಿತ್ತು. ಮಧ್ಯಾಹ್ನದ ನಂತರ ಬೋರ್ಡ್‌ನಲ್ಲಿನ ಪ್ರದರ್ಶನವನ್ನು ನಿಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.