ತುಮಕೂರಿನಲ್ಲಿ ಶನಿವಾರ ಲೇಖಕ ಎಚ್.ಎಸ್.ಸಿದ್ಧಗಂಗಪ್ಪ ರಚನೆಯ ‘ಪದ್ಮಭೂಷಣ ಶಿವಕುಮಾರ ಸ್ವಾಮೀಜಿ’ ಗ್ರಂಥವನ್ನು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಲೋಕಾರ್ಪಣೆಗೊಳಿಸಿದರು.
ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಕುರಿತು ಕನ್ನಡ, ಸಂಸ್ಕೃತದಲ್ಲಿರುವ ಸಾಹಿತ್ಯವನ್ನು ಇಂಗ್ಲಿಷ್‍ಗೆ ತರ್ಜುಮೆ ಮಾಡಿ, ನಾಡಿನ ಮೂಲೆ ಮೂಲೆಗೂ ತಲುಪಿಸಬೇಕು ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಸಲಹೆ ಮಾಡಿದರು.
ನಗರದಲ್ಲಿ ಶನಿವಾರ ಲೇಖಕ ಎಚ್.ಎಸ್.ಸಿದ್ಧಗಂಗಪ್ಪ ಅವರ ‘ಪದ್ಮಭೂಷಣ ಶಿವಕುಮಾರ ಸ್ವಾಮೀಜಿ’ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
‘ಸ್ವಾಮೀಜಿಯನ್ನು ಸಿದ್ಧಗಂಗಪ್ಪ ಹತ್ತಿರದಿಂದ ಬಲ್ಲವರು. ಹಾಗಾಗಿಯೇ ಹೆಚ್ಚು ನಿಖರವಾಗಿ ಅವರ ಜೀವನ ಚರಿತ್ರೆ ಕಟ್ಟಿಕೊಟ್ಟಿದ್ದಾರೆ. ಶಿವಕುಮಾರ ಸ್ವಾಮೀಜಿ ಕುರಿತು ಬಂದಿರುವಷ್ಟು ಕೃತಿಗಳು ಯಾರ ಹೆಸರಲ್ಲೂ ಪ್ರಕಟಗೊಂಡಿಲ್ಲ. ಸ್ವಾಮೀಜಿ ಜೀವನ ಶಾಲಾ–ಕಾಲೇಜುಗಳ ಪಠ್ಯವಾಗುವಂತೆ ಮಾಡಿದರೆ ಮತ್ತಷ್ಟು ಜನರನ್ನು ತಲುಪಬಹುದು’ ಎಂದರು.
ಕೃತಿಕಾರ ಎಚ್.ಎಸ್.ಸಿದ್ಧಗಂಗಪ್ಪ ‘ಸ್ವಾಮೀಜಿಯ ಪ್ರತಿಯೊಂದು ಕ್ಷಣವನ್ನು ಅಕ್ಷರ ರೂಪಕ್ಕೆ ತರಲು ಪ್ರಯತ್ನಿಸಿದ್ದೇನೆ’ ಎಂದು ಹೇಳಿದರು.
ಮಠದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಲೇಖಕ ಎಚ್.ಎಸ್.ಸಿದ್ಧಗಂಗಪ್ಪ ಅವರಿಗೆ ಸಿದ್ಧಗಂಗಾ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿದ್ಧಲಿಂಗ ಸ್ವಾಮೀಜಿ, ಶಿವಸಿದ್ದೇಶ್ವರ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ವಿದ್ವಾಂಸ ಕೋ.ರಂ.ಬಸವರಾಜು, ಹಳೆಯ ವಿದ್ಯಾರ್ಥಿಗಳ ಸಂಘದ ಬಾಲಚಂದ್ರ, ಜಿ.ನಾಗಸುಂದರ್, ಆರ್.ಸಿ.ಪಂಪನಗೌಡ, ಮರೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.