ಶಿರಾ: ತಾಲ್ಲೂಕಿನಾದ್ಯಂತ ಬುಧವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶಿವರಾತ್ರಿ ಅಂಗವಾಗಿ ಭಕ್ತರು ಮುಂಜಾನೆಯಿಂದಲೇ ಶಿವನ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಿವನ ದೇವಾಲಯಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡಿದರು.
ನಗರದ ಸಂತೇಪೇಟೆಯಲ್ಲಿರುವ ಕೊಳದಪ್ಪಲೇಶ್ವರ ದೇವಸ್ಥಾನ, ಪಲ್ಲೇಶ್ವರ ದೇವಾಲಯ, ಬರಗೂರಿನ ಈಶ್ವರ ದೇವಸ್ಥಾನ, ದ್ವಾರಾಳು ಗ್ರಾಮದ ಯರಗುಂಟೇಶ್ವರ ದೇವಸ್ಥಾನ, ಪೂಜಾರಮುದ್ದನಹಳ್ಳಿ ಗ್ರಾಮದ ಸಿದ್ಧಾರೂಢ ಮಠ, ಅದಲೂರು ಗ್ರಾಮದ ಕೂಡಲಸಂಗಮ ಸೇರಿದಂತೆ ಎಲ್ಲ ಕಡೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಪಾತಾಳ ಲಿಂಗೇಶ್ವರಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು. ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಸಲಾಯಿತು. ಜಾಗರಣೆ ಅಂಗವಾಗಿ ಅಹೋರಾತ್ರಿ ಭಜನೆ ಹಮ್ಮಿಕೊಳ್ಳಲಾಗಿದೆ.
ಶಿವನ ದೇವಾಲಯಗಳಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಪೂಜೆ ಸಲ್ಲಿಸುತ್ತಿದ್ದರು. ಸಂಜೆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.