
ತಿಪಟೂರು: ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಸಭೆ ಶನಿವಾರ ನಡೆಯಿತು.
ಶಾಸಕ ಕೆ. ಷಡಕ್ಷರಿ ಮಾತನಾಡಿ, ನೊಣವಿನಕೆರೆಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯ ತಾಂತ್ರಿಕ ಸಮಸ್ಯೆ, ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಯೋಜನೆಗೆ ಚಾಲನೆ ನೀಡಿ ತಿಪಟೂರಿನಿಂದ ಪೈಪ್‌ಲೈನ್ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ನಗರದ ಅಮಾನಿಕೆರೆ ಸೌದರ್ಯರೀಕರಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಅಮಾನಿಕೆರೆ ಆವರಣದಲ್ಲಿ 200 ಹಾಗೂ 300 ಅಳತೆಯ ಗ್ಲಾಸ್‌ಹೌಸ್ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಎಲ್ಲ ಮಹನೀಯರ ಪುತ್ಥಳಿಗಳ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ₹400 ಕೋಟಿ ಯೋಜನೆ ರೂಪಿಸಲಾಗಿದೆ. ₹5 ಕೋಟಿ ವೆಚ್ಚದಲ್ಲಿ ನಗರದ ಹೃದಯಭಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ, ₹9.5ಕೋಟಿ ವೆಚ್ಚದಲ್ಲಿ ಬೃಹತ್ ಬಂಧಿಖಾನೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಜನವಸತಿ ಪ್ರದೇಶದಲ್ಲಿ ಪೊದೆ ತೆರವುಗೊಳಿಸಿ, ಜನಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಹಾಲ್ಕುರಿಕೆ ಸಾರ್ಥವಳ್ಳಿ ಪಶು ಆಸ್ಪತ್ರೆಗಳು ಶಿಥಿಲವಾಗಿದ್ದು ಮರು ನಿರ್ಮಾಣ, ಚನ್ನನಕೆರೆ ಬಳಿ ಸಬ್ ಎಸ್‌ಟಿಪಿ ಘಟಕ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದರು.
ತಹಶೀಲ್ದಾರ್ ಮೋಹನ್ ಕುಮಾರ್, ಇಒ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಗ್ರೇಡ್– 2 ತಹಶೀಲ್ದಾರ್ ಜಗನ್ನಾಥ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.