ಪಾವಗಡ: ತಾಲ್ಲೂಕಿನ ವೈ.ಎನ್. ಹೊಸಕೋಟೆಯಲ್ಲಿ ಸಮರ್ಪಕ ನಿರ್ವಹಣೆಯಿಲ್ಲದೆ ನೀರಿಗೆ ತತ್ವಾರ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೋಟಾರ್ ಪಂಪ್‌ಸೆಟ್ ಸರಿಯಿಲ್ಲ ಎಂದು ನೆಪ ನೀಡಿ ನೀರು ಸರಬರಾಜು ನಿಲ್ಲಿಸಲಾಗಿದೆ. ಬೇಸಿಗೆಯಲ್ಲಿ ಪಂಪ್, ಮೋಟರ್‌ಗಳನ್ನು ಹೆಚ್ಚುವರಿಯಾಗಿ ಸಿದ್ಧಪಡಿಸಿಟ್ಟುಕೊಂಡಿರಬೇಕು ಎಂದು ಅಧಿಕಾರಿಗಳು ಸೂಚನೆ ನಿಡಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಪಂಪ್‌ಹೌಸ್ ಮುಂಭಾಗ ನೀರು ಪೋಲಾಗುತ್ತಿದೆ. ಆದರೆ ಪಂಪ್‌ಹೌಸ್‌ಗೆ ಹೊಂದಿಕೊಂಡಿರುವ ಇಂದಿರಾ ಬಡಾವಣೆ ಸೇರಿದಂತೆ ಗ್ರಾಮದ ಹಲವು ಬಡಾವಣೆಗೆ ನೀರಿಲ್ಲದಂತಾಗಿದೆ. ಕೊಳವೆಬಾವಿಗಳಲ್ಲಿ ನೀರಿದೆ. ಆದರೆ ಪಂಪ್‌ಮೋಟಾರ್ ದುರಸ್ತಿಯಲ್ಲಿವೆ ಎಂಬ ಸಬಾಬು ಹೇಳಿ ಕಳೆದ ಒಂದು ವಾರದಿಂದ ನೀರು ಹರಿಸಿಲ್ಲ. ಒಂದು ಟ್ಯಾಂಕರ್‌ಗೆ ₹400ರಿಂದ ₹500 ನೀಡಿ ನೀರು ಖರೀದಿಸಬೇಕಿದೆ. ದುಡಿದ ಹಣವನ್ನು ನೀರಿಗಾಗಿ ಖರ್ಚು ಮಾಡಬೇಕಿದೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಗ್ರಾಮದ ‘ಬಿ’ ಬ್ಲಾಕ್‌ನ ಕೆಲ ಮನೆಗೆ ಸದಾ ನೀರು ಬಿಡಲಾಗುತ್ತದೆ. ಆದರೆ ಎತ್ತರ ಪ್ರದೇಶದಲ್ಲಿರುವ ಮನೆಯವರು ಎಷ್ಟೇ ಮನವಿ ಮಾಡಿಕೊಂಡರೂ ನೀರು ಬಿಡುವುದಿಲ್ಲ. ಎಲ್ಲರಂತೆ ಕಂದಾಯ, ನೀರಿನ ಬಿಲ್ ಪಾವತಿಸುತ್ತೇವೆ. ಆದರೆ ನೀರು ಹರಿಸಲು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಿಂದೇಟು ಹಾಕುತ್ತಾರೆ. ಕುಡಿಯುವ ನೀರನ್ನು ಕೊಳ್ಳಬೇಕು, ಇತರ ಬಳಕೆ ನೀರನ್ನು ಖರೀದಿಸಬೇಕು ಎಂದು ‘ಬಿ’ ಬ್ಲಾಕ್ ನಿವಾಸಿಗಳು ಆರೋಪಿಸಿದ್ದಾರೆ.
ಅಚ್ಚಮ್ಮನಹಳ್ಳಿ ರಸ್ತೆಯಲ್ಲಿ ತುಂಗಭದ್ರಾ ಯೋಜನೆಯಡಿ ಹರಿದ ನೀರು ಪೋಲಾಗಿದೆ. ಕನಿಷ್ಠ ನೀರು ಪೋಲಾಗದಂತೆ ತಡೆಯುವ ಗೋಜಿಗೂ ಅಧಿಕಾರಿಗಳು ಹೋಗಿಲ್ಲ. ಆದರೆ ಇದೇ ಸ್ಥಳದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಹಲವು ವರ್ಷಗಳಿಂದ ನೀರಿಲ್ಲ ಎಂದು ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಶುದ್ಧೀಕರಣ ಘಟಕ ಇದ್ದರೂ ಸಾರ್ವಜನಿಕರು ಕುಡಿಯುವ ನೀರನ್ನು ದುಪ್ಪಟ್ಟು ಹಣ ನೀಡಿ ಖಾಸಗಿಯವರಿಂದ ಖರೀದಿಸುವಂತಾಗಿದೆ ಎನ್ನುವುದು ಸ್ಥಳೀಯರ ದೂರು.
ಅಧಿಕಾರಿಗಳು ಕೂಡಲೇ ಶುದ್ಧೀಕರಣ ಘಟಕ ಸರಿಪಡಿಸಬೇಕು. ಮೋಟರ್ ದುರಸ್ತಿ ನೆಪ ಹೇಳದೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.