ADVERTISEMENT

ಶ್ರೀಗಳ ದಾರಿಯಲ್ಲಿ ಸಮುದಾಯ ನಡೆಯಲಿ

ಶಿವಕುಮಾರ ಸ್ವಾಮೀಜಿ ಸ್ಮರಣೆ ಮತ್ತು ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಠಾಧೀಶರ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 15:55 IST
Last Updated 21 ಜನವರಿ 2020, 15:55 IST
ತುಮಕೂರು ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಡಾ.ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ನಡೆಯಿತು.
ತುಮಕೂರು ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಡಾ.ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ನಡೆಯಿತು.   

ತುಮಕೂರು: ಶಿವಕುಮಾರಸ್ವಾಮೀಜಿ ಸೂರ್ಯನಂತೆ ಎಲ್ಲರ ಮನೆ, ಮನಸ್ಸು ಬೆಳಗುವ ಮಹಾನ್ ಚೇತನ. ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆ ಎಂದು ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಮಂಗಳವಾರ ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಡಾ.ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆ ಮತ್ತು ಶಿವಾನುಭವಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಶಿವಕುಮಾರಸ್ವಾಮೀಜಿ ಅವರನ್ನು ಸ್ಮರಣೆ ಮಾಡುವುದರೊಂದಿಗೆ ಅವರ ದಾರಿಯಲ್ಲಿ ನಾವು ಸಾಗಬೇಕು, ಅವರ ದಾರಿಯಲ್ಲಿ ಸಾಗಿದರೆ ಮಾತ್ರ ಅವರ ಸ್ಮರಣೋತ್ಸವ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಹುಟ್ಟು- ಸಾವುಗಳನ್ನು ಮೀರಿ ಬಸವಣ್ಣ ಅವರು ತೋರಿದ ದಾರಿಯಲ್ಲಿ ಶ್ರೀಗಳು ನಡೆದರು. ಶ್ರೀಗಳ ಕಮಂಡಲದ ಕೆಳಗೆ ಬೆಳೆದ ನಾವೇ ಧನ್ಯರು. ಅವರ ಕಾಲಘಟ್ಟದಲ್ಲಿ ಅವರೊಂದಿಗೆ ಇದ್ದಿದ್ದೆ ನಮ್ಮ ಪುಣ್ಯ. ಇಂತಹ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿಯೇ ನಮ್ಮ ಸಮುದಾಯ ನಡೆಯಬೇಕು ಎಂದರು.

ADVERTISEMENT

ಶಿವಗಂಗೆ ಹೊನ್ನಮ್ಮ ಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. ಇಷ್ಟಲಿಂಗ ಪೂಜೆಯನ್ನು ಜಗತ್ತಿಗೆ ತೋರಿಸಿಕೊಟ್ಟವರು ಶಿವಕುಮಾರ ಸ್ವಾಮೀಜಿ. 12ನೇ ಶತಮಾನದಲ್ಲಿ ಬಸವಣ್ಣ ಎಲ್ಲ ಧರ್ಮದವರಿಗೆ ಇಷ್ಟಲಿಂಗವನ್ನು ಕೊಟ್ಟರು. ಶಿವಕುಮಾರಸ್ವಾಮೀಜಿ ಅದನ್ನು ಪ್ರಚುರ ಪಡಿಸಿದರು. ಇಷ್ಟಲಿಂಗ ಪೂಜೆಯನ್ನು ಇಷ್ಟಪಟ್ಟು ಮಾಡುತ್ತಲೇ ತಮ್ಮ ಶಕ್ತಿ ಪಡೆದುಕೊಳ್ಳುತ್ತಿದ್ದರು’ ಎಂದರು.

ಆಧುನಿಕ ಶಿಕ್ಷಣದಿಂದ ನಮ್ಮ ಸಮಾಜದ ಸಂಸ್ಕೃತಿ, ಸಂಸ್ಕಾರ ಕಣ್ಮರೆಯಾಗುತ್ತಿದ್ದು, ನಮ್ಮ ಮಕ್ಕಳನ್ನು ಸರಿದಾರಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶ್ರೀಗಳು ಸಾಗಿದ ದಾರಿಯಲ್ಲಿ ನಮ್ಮ ಮಕ್ಕಳನ್ನು ನಡೆಸುವ ನಿಟ್ಟಿನಲ್ಲಿ ಶ್ರೀಗಳ ಕಾಯಕ ತತ್ವವನ್ನು ಅನುಸರಿಸಬೇಕಿದೆ ಎಂದು ಹೇಳಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿಯ ಸ್ಮರಣೆಯೇ ನಮಗೆ ಬೆಳಕು. ಅವರು ಕರಗದೇ ಇರುವ ಮುತ್ತು. ತಮ್ಮ ಜೀವನವೇ ಸಂದೇಶ ಎಂಬಂತೆ ಬದುಕಿದ ಶ್ರೀಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ’ ಎಂದರು.

ಮೈಸೂರಿನ ಶರತ್ ಚಂದ್ರ ಸ್ವಾಮೀಜಿ, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಡಾ.ಶಿವಕುಮಾರ ಶ್ರೀಗಳ ಬಗ್ಗೆ ಉಪನ್ಯಾಸ ನೀಡಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಹಾಗೂ ಮಠದ ಸೇವೆಯಲ್ಲಿ ತೊಡಗಿದ್ದ ಡಾ.ಎಂ.ಎನ್.ಚನ್ನಬಸಪ್ಪ, ಕೆ.ಎಚ್.ಪರಮಶಿವಯ್ಯ, ಎಲ್.ವಿರೂಪಾಕ್ಷಯ್ಯ, ಎಚ್.ವಿ.ವೀರಭದ್ರಯ್ಯ, ಸಿದ್ಧಲಿಂಗಯ್ಯ, ಮಹದೇವಸ್ವಾಮಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗದ್ದುಗೆ ಮಠದ ಮಹಾಂತ ಸ್ವಾಮೀಜಿ, ಬಂಡೆಮಠದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿ ಗೌರವಾಧ್ಯಕ್ಷ ತರಕಾರಿ ಮಹೇಶ್, ಅಧ್ಯಕ್ಷ ಟಿ.ಎನ್.ರುದ್ರೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವಿರೂಪಾಕ್ಷಪ್ಪ, ಖಜಾಂಚಿ ಸೋಮಶೇಖರ್ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿವಕುಮಾರ ಸ್ವಾಮೀಜಿ ಪ್ರತಿಮೆಯನ್ನು ಪೂರ್ಣಕುಂಭ ಹಾಗೂ ವಿವಿಧ ಜಾನಪದ ನೃತ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.