ADVERTISEMENT

ಮಧುಗಿರಿ: ಸಿದ್ದಾಪುರ ಕೆರೆ ನೀರು ಖಾಲಿ

ಕೆಲ ವಾರ್ಡ್‌ಗಳಿಗೆ ವಾರಕ್ಕೆ ಒಮ್ಮೆ ನೀರು ಪೂರೈಕೆ; ನಾಗರಿಕರ ಆತಂಕ

​ಪ್ರಜಾವಾಣಿ ವಾರ್ತೆ
Published 24 ಮೇ 2020, 16:59 IST
Last Updated 24 ಮೇ 2020, 16:59 IST
ಮಧುಗಿರಿ ತಾಲ್ಲೂಕು ಸಿದ್ದಾಪುರ ಕೆರೆ
ಮಧುಗಿರಿ ತಾಲ್ಲೂಕು ಸಿದ್ದಾಪುರ ಕೆರೆ   

ಮಧುಗಿರಿ: ಪಟ್ಟಣದ ಜನರ ಕುಡಿಯುವ ನೀರಿನ ಮೂಲವಾದ ಚೋಳೇನಹಳ್ಳಿ ಕೆರೆ ಹಾಗೂ ಸಿದ್ದಾಪುರ ಕೆರೆಯಲ್ಲಿ ನೀರು ಬತ್ತುತ್ತಿದೆ. ಇದರಿಂದ ಕೆಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ.

ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 30,000 ಜನಸಂಖ್ಯೆ ಇದೆ. ನಗರದ ಜನರಿಗೆ ವಾರಕ್ಕೆ ಒಮ್ಮೆ ಪುರಸಭೆ ನೀರು ಸರಬರಾಜು ಮಾಡುತ್ತಿತ್ತು. ದಿನದಿಂದ ದಿನಕ್ಕೆ ನೀರಿನ ಮೂಲಗಳು ಬರಿದಾಗುತ್ತಿದ್ದು, ನೀರು ಸರಬರಾಜು ತಲೆನೋವಾಗಿದೆ.

ಸಿದ್ದಾಪುರ ಕೆರೆಯಲ್ಲಿ ಶೇಖರಣೆಯಾಗಿದ್ದ ಹೇಮಾವತಿ ನೀರು ಖಾಲಿ ಆಗುತ್ತಿದೆ. ಮೇ 3ರಂದು ಕೆರೆಗೆ ಬರಬೇಕಿದ್ದ ಹೇಮಾವತಿ ನೀರು ಮೇ 24 ಕಳೆದರೂ ಬಂದಿಲ್ಲ.

ADVERTISEMENT

ಹೇಮಾವತಿ ಜಲಾಶಯದಿಂದ ಸಿದ್ದಾಪುರ ಕೆರೆಗೆ 6.50 ಕೋಟಿ ಘನ ಅಡಿ ಹೇಮಾವತಿ ನೀರು ಬರಬೇಕಿತ್ತು. ಈವರೆಗೆ 3.5 ಕೋಟಿ ಘನ ಅಡಿ ಮಾತ್ರ ಹರಿದಿದೆ. ಪೂರ್ಣ ಪ್ರಮಾಣದಲ್ಲಿ ಹೇಮೆ ಹರಿಯದಿದ್ದರೆ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಲಿದೆ.

ಪಟ್ಟಣದ ಶ್ರೀಮಂತರು ಮನೆಗಳಲ್ಲಿ ದೊಡ್ಡ ಪ್ರಮಾಣದ ಸಂಪ್‌ಗಳನ್ನು ಮಾಡಿಸಿಕೊಂಡು ಟ್ಯಾಂಕರ್ ಮೂಲಕ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಬಡವರು ನೀರಿಗಾಗಿ ಕಾಯಬೇಕಾಗಿದೆ. ಇದರಿಂದ ಕೂಲಿ ಕೆಲಸ ಇಲ್ಲದೆ, ಉಪವಾಸದಲ್ಲಿ ದಿನ ಕಳೆಯುವಂತಾಗಿದೆ ಎಂದು ಕರಡಿಪುರ ಹಾಗೂ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ನೋವು ತೋಡಿಕೊಳ್ಳುವರು.

ವಾರ್ಡ್‌ಗಳಿಗೆ ವಾರಕ್ಕೆ ಒಮ್ಮೆ ನೀರು ಪೂರೈಸುತ್ತಾರೆ. ಶ್ರೀಮಂತರು ನಲ್ಲಿಗಳಲ್ಲಿ ನೀರು ಚೆನ್ನಾಗಿ ಬರಲಿ ಎಂದು ಮೋಟರ್‌ ಅಳವಡಿಸಿದ್ದಾರೆ. ಇದರಿಂದ ನಮಗೆ ನೀರು ಬರುತ್ತಿಲ್ಲ. ಟ್ಯಾಂಕ‌ರ್‌ಗಳಿಗೆ ಹಣ ನೀಡಿ ಸಾಕಾಗಿದೆ. ಈ ಬಗ್ಗೆ ಹಲವು
ಬಾರಿ ವಾಟರ್‌ಮ್ಯಾನ್‌ಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎನ್ನುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.