ADVERTISEMENT

ಕಾಟಾಚಾರಕ್ಕೆ ಜಯಂತಿ: ಮುಖಂಡರ ತರಾಟೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 7:05 IST
Last Updated 28 ಜೂನ್ 2025, 7:05 IST
ಶಿರಾದಲ್ಲಿ ಶುಕ್ರವಾರ ಕೆಂಪೇಗೌಡ ಜಯಂತಿಗೆ ಶಾಸಕ‌ ಟಿ.ಬಿ.ಜಯಚಂದ್ರ ಚಾಲನೆ‌ ನೀಡಿದರು
ಶಿರಾದಲ್ಲಿ ಶುಕ್ರವಾರ ಕೆಂಪೇಗೌಡ ಜಯಂತಿಗೆ ಶಾಸಕ‌ ಟಿ.ಬಿ.ಜಯಚಂದ್ರ ಚಾಲನೆ‌ ನೀಡಿದರು   

ಶಿರಾ: ಕಾಟಾಚಾರಕ್ಕೆ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ತಹಶೀಲ್ದಾರ್ ಅವರನ್ನು ವೇದಿಕೆ ಮೇಲೆಯೇ ಸಮಾಜದ ಮುಖಂಡರು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನಲ್ಲಿ ಅತಿ ದೊಡ್ಡ ಜನಾಂಗಕ್ಕೆ‌ ಸೇರಿದ ನಾಯಕರ ಜಯಂತಿ ಆಚರಣೆ ಸಮಯದಲ್ಲಿ ಜನಾಂಗದ ಮುಖಂಡರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಹೊರತುಪಡಿಸಿ ಎಲ್ಲರನ್ನು ನಿರ್ಲಕ್ಷ ಮಾಡಲಾಗಿದೆ. ಕಳೆದ ಬಾರಿಯೂ ಕಾಟಾಚಾರಕ್ಕೆ ಆಚರಣೆ ಮಾಡಿದ್ದಾರೆ. ತಾಲ್ಲೂಕು ಆಡಳಿತ ಕೆಂಪೇಗೌಡರಿಗೆ ಅಪಮಾನ ಮಾಡುತ್ತಿದೆ ಎಂದು ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ನಗರಸಭೆ ಸದಸ್ಯ ಆರ್.ರಾಮು, ಟಿ.ಡಿ.ಮಲ್ಲೇಶ್, ಮುದ್ದುಗಣೇಶ್ ಅವರು ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರದಿಂದ‌ ಜಯಂತಿ ಆಚರಿಸಲಾಗುತ್ತಿದೆ. ಜನಾಂಗದ ಮುಖಂಡರನ್ನು ಒಗ್ಗೂಡಿಸಿ ಆಚರಣೆ ಮಾಡಬೇಕು. ಅದನ್ನು ಬಿಟ್ಟು ಕಡೆಗಣಿಸುವುದು ಎಷ್ಟು ಸರಿ. ಇದು ಕೆಂಪೇಗೌಡ ಜಯಂತಿಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲ ಜಯಂತಿಗಳಲ್ಲಿ ಅಧಿಕಾರಿಗಳು ಇದೇ ರೀತಿ ಮಾಡುತ್ತಿದ್ದಾರೆ. ಇದರ ಜವಾಬ್ದಾರಿ ಹೊತ್ತ ತಹಶೀಲ್ದಾರ್ ನಿರ್ಲಕ್ಷ್ಯತೆ ಖಂಡನೀಯ ಎಂದರು.

ADVERTISEMENT

ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಕೆಂಪೇಗೌಡರು ಎಲ್ಲಾ ವರ್ಗದ ಏಳಿಗೆಗೆ ಅವರವರ ವೃತ್ತಿಗಳಿಗೆ ಅನುಸಾರವಾಗಿ ಬಳೆಪೇಟೆ, ಕುಂಬಾರಪೇಟೆ, ಉಪ್ಪಾರಪೇಟೆ, ಕುಂಚಿಟಿಗರ ಪೇಟೆ ನಿರ್ಮಾಣ ಮಾಡಿದರು. ಸುಮಾರು ಸಾವಿರಕ್ಕಿಂತ ಹೆಚ್ಚು ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿಯಿಂದ ಇಂದು ಬೆಂಗಳೂರು ಸುಂದರ ಹಾಗೂ ಸುಸಜ್ಜಿತವಾಗಿ ನಗರವಾಗಿ ನಿರ್ಮಾಣಗೊಂಡು ವಿಶ್ವದ ಗಮನ ಸೆಳೆದಿದೆ ಎಂದರು.

ತುಮುಲ್ ನಿರ್ದೇಶಕ ಎಸ್.ಆರ್ ಗೌಡ, ಡಿವೈಎಸ್‌ಪಿ ಶೇಖರ್, ಇಒ ಆರ್.ಹರೀಶ್, ಬಿಇಒ ಕೃಷ್ಣಪ್ಪ, ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮೆಹಮೂದ್, ಬಿ.ಎಂ.ರಾಧಾಕೃಷ್ಣ, ಆರ್.ರಾಮು, ಎಂ.ಆರ್.ಶಶಿಧರ್ ಗೌಡ, ಎಚ್.ಗುರುಮೂರ್ತಿಗೌಡ, ಟಿ.ಡಿ.ಮಲ್ಲೇಶ್, ಮುದ್ದುಗಣೇಶ್, ರಂಗನಾಥ ಗೌಡ, ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.