ADVERTISEMENT

ಪೊಲೀಸರು, ಪ್ರತಿಭಟನಕಾರರ ನಡುವೆ ಚಕಮಕಿ

ಜಿಲ್ಲೆಯ ವಿವಿಧೆಡೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 5:05 IST
Last Updated 27 ನವೆಂಬರ್ 2020, 5:05 IST
ತುಮಕೂರಿನ ಬಿಎಸ್‌ಎನ್‌ಎಲ್ ಕಚೇರಿ ಮುಂದೆ ಪ್ರತಿಭಟಿಸಿದ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು 
ತುಮಕೂರಿನ ಬಿಎಸ್‌ಎನ್‌ಎಲ್ ಕಚೇರಿ ಮುಂದೆ ಪ್ರತಿಭಟಿಸಿದ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು    

ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಗುರುವಾರ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಮೇರೆಗೆ ನಗರದಲ್ಲಿಯೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಅಂಗನವಾಡಿ ನೌಕರರು ಸ್ವಾತಂತ್ರ್ಯ ಚೌಕದಿಂದ, ಪೌರಕಾರ್ಮಿಕರು ಟೌನ್‍ಹಾಲ್‍ನಿಂದ, ಫುಟ್‌ಪಾತ್ ವ್ಯಾಪಾರಿಗಳು ಡಾ.ಅಂಬೇಡ್ಕರ್ ಭವನದಿಂದ ಪ್ರತ್ಯೇಕ ಗುಂಪುಗಳಾಗಿ ಬಿಎಸ್‍ಎನ್‍ಎಲ್ ಕಚೇರಿ ಬಳಿ ಜಮಾಯಿಸಿದರು. ಬಿಎಸ್‍ಎನ್‍ಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಾನವ ಸರಪಳಿ ರಚಿಸಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿ ನಿರ್ಮಿಸುವ ವಿಚಾರದಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿಕ ಚಕಮಕಿ ಸಹ ನಡೆಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿವೆ. ಶಿಕ್ಷಣ, ಆರೋಗ್ಯ, ರೈಲ್ವೆ, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮೆ, ಬ್ಯಾಂಕ್, ಬಂದರು, ವಿಮಾನನಿಲ್ದಾಣ ಹಾಗೂ ರಕ್ಷಣಾ ವಲಯದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡುತ್ತಿದ್ದು ಇದನ್ನು ವಿರೋಧಿಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದರು.

ADVERTISEMENT

ಎಐಟಿಯುಸಿ ಜಿಲ್ಲಾ ಸಂಚಾಲಕಿ ಮಂಜುಳಾ, ಮುಖಂಡ ಕಂಬೇಗೌಡ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‍ಮುಜೀಬ್, ತಾಲ್ಲೂಕು ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿದರು.

ಸಿಐಟಿಯು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಶಿವಕುಮಾರ್, ಅಂಗನವಾಡಿ ನೌಕರರ ಸಂಘದ ಗಂಗಾ, ಗೌರಮ್ಮ, ಜಬಿನಾ, ರಾಜಶೇಖರ್, ಮುತ್ತುರಾಜ್, ವಾಸೀಮ್, ಕಟ್ಟಡ ಕಾರ್ಮಿಕರ ಸಂಘದ ಗಂಗಾಧರ್, ಕಲೀಲ್, ಶಂಕರಪ್ಪ, ಎಐಟಿಯುಸಿ ಕಾಂತರಾಜು, ಆಶ್ವತ್ಥನಾರಾಯಣ್, ಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.