ADVERTISEMENT

ಕಾಮಗಾರಿ ನಂತರ ಸ್ಮಾರ್ಟ್‌ಲುಕ್‌: ಟೀಕಿಸುವವರಿಗೆ ವ್ಯವಸ್ಥಾಪಕ ನಿರ್ದೇಶಕರ ಟಾಂಗ್‌

ಸ್ಮಾರ್ಟ್‌ಸಿಟಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 8:41 IST
Last Updated 26 ಜೂನ್ 2019, 8:41 IST
ಬಿ.ಟಿ.ರಂಗಸ್ವಾಮಿ
ಬಿ.ಟಿ.ರಂಗಸ್ವಾಮಿ   

ತುಮಕೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಅವುಗಳ ಅಗತ್ಯತೆ ಮತ್ತು ಪರಿಣಾಮಗಳು ಟೀಕಿಸುವವರು ಸೇರಿದಂತೆ ಎಲ್ಲರಿಗೂ ಗೊತ್ತಾಗಲಿವೆ ಎಂದು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ ಹೇಳಿದರು.

ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿ ಯೋಜನೆಯನ್ನು ಘೋಷಿಸಿ ನಾಲ್ಕು ವರ್ಷಗಳು ಪೂರೈಸಿರುವ ನೆನಪಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳಿಂದಾಗಿ ಕೆಲವು ಕಡೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ಅಡಚಣೆ ತಾತ್ಕಾಲಿಕ. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದಲ್ಲಿ ದೇಶದ 100 ನಗರಗಳ ಪೈಕಿ ತುಮಕೂರು 22ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಅನುದಾನದಲ್ಲಿ ಶೇ 70ರಷ್ಟನ್ನು ಪ್ರದೇಶಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಶೇ 30ರಷ್ಟನ್ನು ಆಧುನಿಕ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಲು ವ್ಯಯಿಸಲಾಗುತ್ತಿದೆ. ಪ್ರದೇಶ ಅಭಿವೃದ್ಧಿಯಲ್ಲಿ ನಗರದ 4, 5, 14, 15, 16, 19 ಮತ್ತು ಭಾಗಶಃ 7ನೇ ವಾರ್ಡ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇಲಾಖೆಗಳಿಗೆ ಅನುಷ್ಠಾನದ ಹೊಣೆ: ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆ ಆವರಣದಲ್ಲಿ ತುರ್ತು ಚಿಕಿತ್ಸೆಯ ಟ್ರಾಮಾ ಕೇಂದ್ರ ನಿರ್ಮಿಸಲು, ಕೆಎಸ್‌ಆರ್‌ಟಿಸಿ ನಗರ ಕೇಂದ್ರ ಬಸ್‌ ನಿಲ್ದಾಣ ಅಭಿವೃದ್ಧಿಪಡಿಸಲು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮಹಾತ್ಮಾ ಗಾಂಧಿ ಕ್ರೀಡಾಂಗಣ ಉನ್ನತೀಕರಿಸಲು ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅಮಾನಿಕೆರೆಗೆ ನೀರು ತುಂಬಿಸುವ ಯೋಜನೆಗಳಿಗೆ ಸ್ಮಾರ್ಟ್‌ಸಿಟಿಯಿಂದ ಅನುದಾನ ನೀಡಲಾಗುತ್ತಿದೆ ಎಂದು ಸ್ಮಾರ್ಟ್‌ಸಿಟಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಮಾರ್ಟ್‌ಸಿಟಿಯಲ್ಲಿ ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲುವ ಹೊಣೆಯನ್ನು ಐಬಿ ಗ್ಲೊಬಲ್‌ ಮತ್ತು ಆರ್ಯವರ್ತ ಕಂಪನಿಗಳಿಗೆ ನೀಡಲಾಗಿದೆ. ಅವರು ರೂಪಿಸಿದ ಯೋಜನೆಗಳನ್ನು ಟೆಂಡರ್‌ ಪಡೆದ ಗುತ್ತಿಗೆದಾರರಿಂದ ಅನುಷ್ಠಾನಗೊಳಿಸುತ್ತಿದ್ದೇವೆ. ಕೇಂದ್ರದಿಂದಲೇ ಆಯ್ಕೆಯಾದ ಪಿಎಂಸಿ ಮತ್ತು ಬಿಎಂಸಿ ಕಂಪನಿಗಳಿಂದ ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸ್ಮಾರ್ಟ್‌ಸಿಟಿಯ ಯೋಜನಾ ಸಲಹಾ ತಂಡದ ಪ್ರಧಾನ ವ್ಯವಸ್ಥಾಪಕ ಪವನಕುಮಾರ್ ಸೈನಿ, ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಎಂ.ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಪ್ರಮುಖ ಯೋಜನೆಗಳು

ಯೋಜನೆ–ಯೋಜನಾ ವೆಚ್ಚ (₹ ಕೋಟಿಗಳಲ್ಲಿ)

ಸರ್ಕಾರಿ ಎಂಪ್ರೆಸ್‌ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಸಭಾಂಗಣ, ಪ್ರಯೋಗಾಲಯ, ಗ್ರಂಥಾಲಯ ನಿರ್ಮಾಣ: ₹13 ಕೋಟಿ

ಹೊರ ವರ್ತುಲ ರಸ್ತೆ 4 ಪಥಗಳಲ್ಲಿ ಅಭಿವೃದ್ಧಿ: ₹114.20 ಕೋಟಿ

ಅಶೋಕ ರಸ್ತೆ ಅಭಿವೃದ್ಧಿ: ₹16.8 ಕೋಟಿ

ಇಂಟಿಗ್ರೇಟೆಡ್‌ ಸಿಟಿ ಮ್ಯಾನೇಜ್‌ಮೆಂಟ್‌, ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌(ಐಸಿಎಂಸಿಸಿ) ನಿರ್ಮಾಣ: ₹59.59 ಕೋಟಿ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮೇಲ್ದರ್ಜೆಗೆ: ₹93.78 ಕೋಟಿ

ಅಪಘಾತ ಚಿಕಿತ್ಸಾ ಕೇಂದ್ರ(ಟ್ರಾಮಾ): ₹56 ಕೋಟಿ

ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸುವ ಯೋಜನೆ: ₹56.55 ಕೋಟಿ

ಮಹಾತ್ಮ ಗಾಂಧಿ ಕ್ರೀಡಾ ಸಂಕೀರ್ಣ ಅಭಿವೃದ್ಧಿ: ₹49.97 ಕೋಟಿ

ನಗರ ಕೇಂದ್ರ ಗ್ರಂಥಾಲಯಕ್ಕೆ ಹೊಸ ಕಟ್ಟಡ ಮತ್ತು ನವೋದ್ಯಮಿಗಳಿಗೆ ತರಬೇತಿ ಕೇಂದ್ರ: ₹33.51 ಕೋಟಿ

ಆಯ್ದ ಉದ್ಯಾನಗಳ ಅಭಿವೃದ್ಧಿ: ₹ 25 ಕೋಟಿ

ಮಾರಿಯಮ್ಮ ನಗರದ ಬಡವರಿಗೆ ವಸತಿ ಸೌಲಭ್ಯ: ₹ 12.33 ಕೋಟಿ

ಬಹುಪಯೋಗಿ ವಾಣಿಜ್ಯ ಸಂಕೀರ್ಣ ನಿರ್ಮಾಣ: ₹ 60 ಕೋಟಿ

‘ಪ್ರಗತಿಯಲ್ಲಿ 47 ಕಾಮಗಾರಿ’

ಸ್ಮಾರ್ಟ್‌ಸಿಟಿಯಡಿ 22 ಸಣ್ಣ ಕಾಮಗಾರಿಗಳು ಮುಕ್ತಾಯಗೊಂಡಿವೆ. ₹ 515.43 ಕೋಟಿಗಳ 47 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ರಂಗಸ್ವಾಮಿ ಅವರು ಮಾಹಿತಿ ನೀಡಿದರು.

₹ 255.40 ಕೋಟಿಗಳ 17 ಯೋಜನೆಗಳು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿವೆ. ₹ 135.75 ಕೋಟಿಗಳ ಯೋಜನೆಗಳು ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತಿದೆ ಎಂದರು.

*ಸ್ಮಾರ್ಟ್‌ಸಿಟಿಯ ಎಲ್ಲ ಕಾಮಗಾರಿಗಳು ಪಾರದರ್ಶಕವಾಗಿ ನಡೆಯುತ್ತಿವೆ. ಇಲ್ಲಿ ಯಾರು, ಯಾರಿಗೂ ಕಮಿಷನ್‌ ಕೊಡುತ್ತಿಲ್ಲ, ತೆಗೆದುಕೊಳ್ಳುತ್ತಿಲ್ಲ.

-ಬಿ.ಟಿ.ರಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್‌ ಸಿಟಿ ಲಿಮಿಟೆಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.