ತುಮಕೂರಿನಲ್ಲಿ ಸೋಮವಾರ ಬಿಜೆಪಿ ನಿಯೋಜಿತ ಅಭ್ಯರ್ಥಿ ವಿ.ಸೋಮಣ್ಣ ತಿಗಳ ಸಮುದಾಯದ ಮುಖಂಡರಾದ ಕಮಲಮ್ಮ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದರು.
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ವಿ.ಸೋಮಣ್ಣ ತಿಗಳ ಸಮುದಾಯದ ಮುಖಂಡರ ಮನೆಗಳಿಗೆ ಸೋಮವಾರ ಭೇಟಿ ನೀಡಿ, ಬೆಂಬಲಿಸುವಂತೆ ಮನವಿ ಮಾಡಿದರು.
ನಗರಸಭೆಯ ಮಾಜಿ ಅಧ್ಯಕ್ಷೆ ಕಮಲಮ್ಮ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದರು. ‘ತಿಗಳ ಅಭಿವೃದ್ಧಿ ನಿಗಮಕ್ಕೆ ಚಾಲನೆ ನೀಡಬೇಕು. ಮುಂದಿನ ವಿಧಾನಸಭೆ, ವಿಧಾನ ಪರಿಷತ್ತಿನ ಚುನಾವಣೆಯ ಸಮಯದಲ್ಲಿ ಸಮುದಾಯದ ಮುಖಂಡರಿಗೆ ಅವಕಾಶ ಕಲ್ಪಿಸಬೇಕು’ ಎಂದು ಸೋಮಣ್ಣ ಅವರನ್ನು ಒತ್ತಾಯಿಸಿದರು.
‘ಧ್ವನಿ ಇಲ್ಲದವರ ಪರ ಕೆಲಸ ಮಾಡಿದ್ದೇನೆ. ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ. ನಿಮ್ಮನ್ನು ಬಲಪಡಿಸುವ ಕೆಲಸ ಮಾಡುತ್ತೇನೆ. ಶೀಘ್ರದಲ್ಲಿಯೇ ತಿಗಳ ಸಮುದಾಯದ ಸಮಾವೇಶ ಏರ್ಪಡಿಸಲಾಗುವುದು’ ಎಂದು ಸೋಮಣ್ಣ ಹೇಳಿದರು.
ಶಾಸಕ ಜಿ.ಬಿ.ಜೋತಿಗಣೇಶ್, ಮುಖಂಡರಾದ ಅನಂತರಾಜು, ಭೀಮಸಂದ್ರ ಕೃಷ್ಣಪ್ಪ, ಟಿ.ಜಿ.ಹನುಮಂತರಾಜು ಪಟೇಲ್, ರಾಜಶೇಖರ್, ಕೇಶವ ಕುಲದೀಪ್, ಲಕ್ಷ್ಮಯ್ಯ, ರಾಮಕೃಷ್ಣ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.