ADVERTISEMENT

ಕುಟುಂಬ ರಾಜಕಾರಣ ಕೊನೆಗಾಲ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಸೋಮಶೇಖರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:51 IST
Last Updated 2 ಮೇ 2019, 10:51 IST
ಬಿ.ಸೋಮಶೇಖರ್
ಬಿ.ಸೋಮಶೇಖರ್   

ತುಮಕೂರು: ‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಈಗ ಕೊನೆಗಾಲ ಬಂದಿದೆ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಸೋಮಶೇಖರ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸುವ ಮೂಲಕ ಅವರು ಅನುಸರಿಸಿಕೊಂಡು ಬಂದ ಜಾತಿ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಕೆಟ್ಟ ಬೇರುಗಳನ್ನು ಜನ ಕಿತ್ತು ಹಾಕುತ್ತಾರೆ’ ಎಂದು ಹೇಳಿದರು.

‘ಈ ದೇಶದಲ್ಲಿ ಜವಾಹರಲಾಲ್ ನೆಹರೂ ಕುಟುಂಬದ ವಶಂಸ್ಥರು ರಾಜಕಾರಣ ಮಾಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ರಾಜಕಾರಣ ಮಾಡಿದ್ದಾರೆ. ಈಗ ರಾಹುಲ್ ಗಾಂಧಿ ಬಂದಿದ್ದಾರೆ. ಇವರೆಲ್ಲ ಒಬ್ಬರ ನಂತರ ಒಬ್ಬರು ಬಂದರು. ಆದರೆ, ದೇವೇಗೌಡರ ಕುಟುಂಬದ ಸದಸ್ಯರು ಏಕ ಕಾಲಕ್ಕೇ ಮುಖ್ಯಮಂತ್ರಿ, ಶಾಸಕರು, ಸಚಿವರು ಆಗಿದ್ದಾರೆ. ಈಗ 87 ವರ್ಷದ ದೇವೇಗೌಡರು ಮತ್ತು ಅವರ ಮೊಮ್ಮಕ್ಕಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಂತಹ ಕುಟುಂಬ ರಾಜಕಾರಣ ದೇಶದಲ್ಲಿ ಎಲ್ಲೂ ಕಾಣಲು ಸಿಗಲ್ಲ’ ಎಂದು ಹೇಳಿದರು.

ADVERTISEMENT

‘ದಲಿತರಿಗೆ ಸಾಂದರ್ಭಿಕ ಸೇವಾ ಜೇಷ್ಠತೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು ದಲಿತರಿಗೆ ಸಾಂವಿಧಾನಿಕ ರಕ್ಷಣೆ ನೀಡಿದ್ದು ಮಾಜಿ ಪ್ರಧಾನಿ ವಾಜಪೇಯಿ. ಬ್ಯಾಕ್ ಲಾಗ್ ಹುದ್ದೆಗಳಿಗೆ ಸಂವಿಧಾನಿಕ ರಕ್ಷಣೆ ನೀಡಿದ್ದು ವಾಜಪೇಯಿ ಅವರೇ. ದೇವೇಗೌಡರೇ ಪ್ರಧಾನಿಯಾಗಿದ್ದಾಗ ದಲಿತರು ನ್ಯಾಯಕ್ಕೆ ಕೋರಿದರೂ ಸ್ಪಂದಿಸಲಿಲ್ಲ. 2001ರಲ್ಲಿ ವಾಜಪೇಯಿ ಅವರು ಸ್ಪಂದಿಸಿದರು. ದಲಿತರಿಗೆ ಅನ್ಯಾಯ ಮಾಡಿಕೊಂಡು ಬಂದ ದೇವೇಗೌಡರಿಗೆ ದಲಿತರು ಹೇಗೆ ಬೆಂಬಲಿಸುತ್ತಾರೆ’ ಎಂದು ಹೇಳಿದರು.ದೇವೇಗೌಡರ ಕಾಲದಲ್ಲಿ ರೈತರಿಗೆ ಅನ್ಯಾಯ ಆದಷ್ಟು ಬೇರೆಯವರ ಕಾಲದಲ್ಲಿ ಆಗಿಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾಗ ಕಂದಾಯ ಕಾಯ್ದೆ–109ಗೆ ತಿದ್ದುಪಡಿ ತಂದು ಎಷ್ಟೇ ಜಮೀನಿದ್ದರೂ ಮಾರಾಟ ಮಾಡಲು ಅವಕಾಶಕೊಟ್ಟರು. ಅದರ ಪರಿಣಾಮ ರೈತರು ಜಮೀನು ಮಾರಾಟ ಮಾಡಿ ಬೀದಿಪಾಲಾದರು. ನೈಸ್ ಕಂಪನಿಗೆ ಭೂಮಿ ಮಾರಾಟ ಮಾಡಿದರು. ಹೀಗೆ ರೈತರು ಆ ಕಂಪನಿಗೆ ಜಮೀನು ಮಾರಾಟ ಮಾಡುವಲ್ಲಿ ದೇವೇಗೌಡರ ಕೈವಾಡವೂ ಇದೆ. ಆ ಕಂಪನಿಯು ಪಾಲು ಕೊಡಲಿಲ್ಲ ಎಂಬ ಕಾರಣಕ್ಕೆ ದೇವೇಗೌಡರು ಅದರ ವಿರುದ್ಧ ತಿರುಗಿ ಬಿದ್ದರು ಎಂದು ಆರೋ‍ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.