ತುಮಕೂರು: ಧರ್ಮಸ್ಥಳದಲ್ಲಿ ಸೌಜನ್ಯ ಮೇಲೆ ಅತ್ಯಾಚಾರ ಹಾಗೂ ಕೊಲೆಯಾಗಿ ಅ. 9ಕ್ಕೆ 13 ವರ್ಷಗಳು ತುಂಬಿದ್ದರೂ, ಈವರೆಗೂ ಆಕೆ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದು ಜನಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ಯು ರಾಜ್ಯವ್ಯಾಪಿ ‘ನ್ಯಾಯಕ್ಕಾಗಿ ಜನಾಗ್ರಹ ದಿನ’ಕ್ಕೆ ಕರೆ ನೀಡಿತ್ತು. ಈ ಕೆರೆಯ ಮೇರೆಗೆ ಜನಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಮನವಿ ಸಲ್ಲಿಸಲಾಯಿತು.
ಧರ್ಮಸ್ಥಳದಲ್ಲಿ ದಾಖಲಾದ ನೂರಾರು ಅಸಹಜ ಸಾವು, ಕೊಲೆ, ಅತ್ಯಾಚಾರ, ಭೂ ಹಗರಣ, ದಲಿತರಿಗೆ ಸೇರಿದ ಭೂಮಿ ಕಬಳಿಕೆ ನಡೆಯುತ್ತಿದ್ದರೂ ಸಂತ್ರಸ್ತರಿಗೆ ಈವರೆಗೂ ನ್ಯಾಯ ಸಿಕ್ಕಿಲ್ಲ. ಸಾಲದ ಹೆಸರಿನಲ್ಲಿ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ಕಿಡಿಕಾರಿದರು.
ಲೇಖಕಿ ಬಾ.ಹ.ರಮಾಕುಮಾರಿ, ‘ಸೌಜನ್ಯ ಅತ್ಯಾಚಾರ, ಕೊಲೆಯಾಗಿ 13 ವರ್ಷಗಳು ಸಂದರೂ ನೈಜ ಆರೋಪಿಗಳನ್ನು ಬಂಧಿಸದಿರುವುದು ನಾಗರಿಕ ಸಮಾಜಕ್ಕೆ ಮಾಡಿರುವ ಅಪಮಾನ. ಈಗ ಆರಂಭವಾಗಿರುವ ಎಸ್‍ಐಟಿ ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿ ನಡೆಯಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.
ಹೋರಾಟಗಾರ್ತಿ ಕಲ್ಯಾಣಿ, ‘ದೈವೀಕರಣದ ರೂಪಕೊಟ್ಟು ಎಸ್‌ಐಟಿ ತನಿಖೆಯನ್ನು ದಾರಿ ತಪ್ಪಿಸಲು ಸರ್ಕಾರ ಬಿಡಬಾರದು. ಕಾನೂನು ಎಲ್ಲರಿಗೂ ಅನ್ವಯವಾಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.
ಹೋರಾಟಗಾರ ಕೆ.ದೊರೈರಾಜು, ‘ನ್ಯಾಯಕ್ಕಾಗಿ ಚಳವಳಿ ನಡೆಸಿದರೆ ಅದನ್ನು ಕೆಲವು ಶಕ್ತಿಗಳು ವಿಕೃತಗೊಳಿಸಿ ಸಂತ್ರಸ್ತರನ್ನು ಗುರಿಯಾಗಿಸಿ ದಾಳಿ ಮಾಡುವುದನ್ನು ಜನರು ಹಿಮ್ಮೆಟ್ಟಿಸಬೇಕು’ ಎಂದು ಹೇಳಿದರು.
ರೈತ, ಕಾರ್ಮಿಕ ಸಂಘಟನೆ ಮುಖಂಡ ಬಿ.ಉಮೇಶ್, ‘ವಿರೋಧ ಪಕ್ಷ ಬಿಜೆಪಿ ಬಹಿರಂಗವಾಗಿ ಎಸ್ಐಟಿ ತನಿಖೆಗೆ ಒಪ್ಪಿಕೊಂಡು, ಇನ್ನೊಂದು ಕಡೆ ಬೆದರಿಕೆ ಹಾಕುತ್ತಿದೆ. ಇಂತಹ ನಿಲುವು ಬಿಟ್ಟು ಸಂತ್ರಸ್ತರ ಪರವಾಗಿ ಧ್ವನಿ ಎತ್ತಿಬೇಕು’ ಎಂದರು.
ಸ್ಲಂ ಜನಾಂದೋಲನ ಸಂಘಟನೆ ಮುಖಂಡ ಎ.ನರಸಿಂಹಮೂರ್ತಿ, ‘ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದಿರುವ ಕೊಲೆ, ಇತರೆ ಅಪರಾಧ ಪ್ರಕರಣಗಳನ್ನು ಭೂ ಹಗರಣಗಳಿಂದ ಪ್ರತ್ಯೇಕಿಸಿ ನೋಡಬಾರದು. ಜಮೀನು ಕಬಳಿಕೆ, ದಲಿತರು, ಆದಿವಾಸಿಗಳು, ಹಿಂದುಳಿದವರನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗಿದೆ. ನಾಲ್ಕೈದು ದಶಕಗಳಲ್ಲಿ ನಡೆದಿರುವ ಜಮೀನು ಪರಭಾರೆಯನ್ನೂ ಸೇರಿಸಿ ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಕಂಬೇಗೌಡ, ಎನ್.ಇಂದ್ರಮ್ಮ, ಕಲ್ಪನ, ಅನುಪಮ, ಅರುಣ್, ಅಜ್ಜಪ್ಪ, ಎನ್.ಕೆ.ಸುಬ್ರಮಣ್ಯ, ಗಿರೀಶ್, ಸೈಯದ್ ಮುಜೀಬ್, ಲೋಕೇಶ್, ಇಂತು, ಷಣ್ಮುಖಪ್ಪ, ಮಂಜುಳ, ಉಮಾದೇವಿ, ಕಿಶೋರ್, ಜವಾಹರ್, ಅಶ್ವತ್ಥಯ್ಯ, ತಾಜುದ್ದೀನ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.