ಹುಳಿಯಾರು: ಡಿಸೆಂಬರ್ ಹಾಗೂ ಜನವರಿ ತಿಂಗಳು ಸುಗ್ಗಿಯ ಕಾಲವಾಗಿದ್ದು, ರೈತರು ಬೆಳೆದ ಬೆಳೆಯನ್ನು ತಮ್ಮ ಗ್ರಾಮದ ರೈತ ಕಾರ್ಮಿಕರೊಂದಿಗೆ ಹೊಲದಲ್ಲಿ ಕಟಾವು ಮಾಡಿ ಕಣ ನಿರ್ಮಿಸಿ ಒಕ್ಕಣಿ ಮಾಡಿ ಸುಗ್ಗಿ ಮಾಡುವುದೇ ಸಂಭ್ರಮ. ಆದರೆ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಿದಂತೆ ಕಟಾವು ಯಂತ್ರಗಳು ಕಣ ಸಂಸ್ಕೃತಿಯನ್ನು ಕಸಿದುಕೊಂಡಿರುವುದರ ಜತೆ ರೈತರ ನಡುವಿನ ಬಾಂಧವ್ಯವೂ ಕಣ್ಮರೆಯಾಗಿದೆ.
ಜುಲೈ, ಅಗಸ್ಟ್ ತಿಂಗಳಿನಲ್ಲಿ ರಾಗಿ, ನವಣೆ, ಸಾಮೆ ಸೇರಿದಂತೆ ಇತರೆ ಬೀಜಗಳ ಬಿತ್ತನೆ ಮಾಡುತ್ತಾರೆ. ಉತ್ತಮ ಮಳೆಯಾಗಿ ಇನ್ನೇನು ಡಿಸೆಂಬರ್ ತಿಂಗಳು ಬಂತೆಂದರೆ ಕೊಯ್ಲು ಮಾಡುವ ಕಾಲ ಸನ್ನಿಹಿತವಾಗುತ್ತದೆ. ಗ್ರಾಮಗಳಲ್ಲಿ ರೈತರು, ಕೂಲಿ ಕಾರ್ಮಿಕರ ಜತೆ ಮುಯ್ಯಾಳು ಪದ್ಧತಿಯಲ್ಲಿ ನೆರೆಹೊರೆ ರೈತರನ್ನು ಕರೆದುಕೊಂಡು ಬೆಳೆ ಕಟಾವು ಮಾಡುವುದು, ನಂತರ ಬೆಳಗ್ಗೆಯ ಚಳಿಯನ್ನು ಲೆಕ್ಕಿಸದೆ ಕೋಳಿ ಕೂಗುವ ವೇಳೆಗಾಗಲೇ ಹೊಲಗಳಲ್ಲಿ ಕೊಯ್ಲು ಮಾಡಿದ ಬೆಳೆಯನ್ನು ಮೆದೆ ಕಟ್ಟುತ್ತಿದ್ದರು. ಕಣಗಳಿಗೆ ಒಯ್ಯಲು ಯಾವುದೇ ಸಮಸ್ಯೆ ಇರದೆ ಹೋದರೆ ಎತ್ತಿನಗಾಡಿ ಅಥವಾ ಟ್ರಾಕ್ಟರ್‌ಗಳಲ್ಲಿ ತುಂಬಿ ಸಾಗಿಸುತ್ತಿದ್ದರು. ಇನ್ನೂ ಸಮಸ್ಯೆ ಇದ್ದರೆ ಹೊಲಗಳಲ್ಲಿಯೇ ಬಣವೆ ಹಾಕಿ, ಬಾದೆ ಹುಲ್ಲಿನ ಮುಚ್ಚಳಿಕೆ ಮಾಡಿ ಬರುತ್ತಿದ್ದರು.
ಕಟಾವು ಕೆಲಸಕ್ಕಾಗಿ ಕೂಲಿ ಕಾರ್ಮಿಕರು, ಒಂದಷ್ಟು ಮಹಿಳೆಯರು ಗುಂಪು ಕಟ್ಟಿಕೊಂಡು ಹೊಲಗಳನ್ನು ಕೊಯ್ಲು ಮಾಡಲು ಒಪ್ಪಂದ ಮಾಡಿಕೊಂಡು ಬೆಳಗ್ಗೆ 6 ಗಂಟೆಯಿಂದ ಸಂಜೆಯವರೆಗೆ ದಣಿವರಿಯದೆ ಕೊಯ್ಲು ಮಾಡುತ್ತಿದ್ದರು. ಇದರಿಂದ ಒಂದಷ್ಟು ಹಣವನ್ನೂ ಸಂಪಾದನೆ ಮಾಡುತ್ತಿದ್ದರು. ಇನ್ನೂ ಕೂಲಿ ಕಾರ್ಮಿಕರು ಕೊಯ್ಲು ಕೆಲಸಕ್ಕೆ ಬಂದರೆ ರೈತರ ಮನೆಗಳಿಗೆ ಸಂಭ್ರಮ ಮನೆ ಮಾಡಿರುತ್ತಿತ್ತು. ಅವರಿಗೆ, ಕಾಫಿ, ತಿಂಡಿ, ಊಟ ಮಾಡುವ ಕೆಲಸ ಕೊಯ್ಲು ಮಾಡಿಸುವ ಮನೆಯ ಮಹಿಳೆಯರದ್ದಾಗಿರುತ್ತಿತ್ತು.
ಕಣಕ್ಕೆ ತೆನೆಭರಿತ ಹುಲ್ಲು ತಂದು ರೋಣಗಲ್ಲಿನ ಮೂಲಕ ರಾಗಿ ಹಾಗೂ ಹುಲ್ಲನ್ನು ಬೇರ್ಪಡಿಸುವ ಕಾರ್ಯ ನಡೆದಿರುತ್ತಿತ್ತು. ನಾಲ್ಕೈದು ದಿನ ಕಣದಲ್ಲಿ ಹತ್ತಾರು ಮಂದಿ ಕೆಲಸ ಮಾಡಿ ಕಾಳನ್ನು ರಾಶಿ ಮಾಡುತ್ತಿದ್ದರು. ಮನೆಯ ದೊಡ್ಡವರು, ಚಿಕ್ಕವರು ಎಲ್ಲ ಸೇರಿ ಕಾಳು ಜರಡಿ ಹಿಡಿಯುವುದು, ಹುಲ್ಲನ್ನು ಕಣದ ಸುತ್ತ ಮೆದೆ ಹಾಕುವುದರಲ್ಲಿ ಮಗ್ನರಾಗುತ್ತಿದ್ದರು. ಇನ್ನೂ ಚಿಕ್ಕ ಮಕ್ಕಳಂತೂ ರಾಶಿ ಪೂಜೆ ನಂತರ ಕೊಡುವ ಫಲಹಾರಕ್ಕಾಗಿ ಕಣಗಳ ಬಳಿ ಗುಂಪು ಕಟ್ಟಿಕೊಂಡು ಬರುತ್ತಿದ್ದರು. ಕೊನೆಯ ದಿನ ಸಂಜೆ ರಾಶಿ ಪೂಜೆ ಮಾಡಿ ಧಾನ್ಯವನ್ನು ಮನೆಗೆ ಸಾಗಿಸುವುದು ಸಂಸ್ಕೃತಿಯಾಗಿತ್ತು.
ಇತ್ತೀಚಿನ ದಿನಗಳಲ್ಲಿ ಬೆಳೆ ಕಟಾವು ಮಾಡುವ ದೈತ್ಯ ಯಂತ್ರಗಳು ಹೊಲಗಳಿಗೆ ಪ್ರವೇಶ ಮಾಡಿವೆ. ಕಟಾವು, ಕಣ ಸಂಸ್ಕೃತಿ ಸೇರಿದಂತೆ ಸುಗ್ಗಿಯ ಕೆಲಸಗಳನ್ನು ಅಪೋಶನ ಮಾಡಿಕೊಂಡಿದೆ. ವಾರಗಟ್ಟಲೇ ಕೂಲಿ ಕಾರ್ಮಿಕರು, ಮನೆಯವರು ಮಾಡಬೇಕಿದ್ದ ಕೆಲಸವನ್ನು ಗಂಟೆ ಲೆಕ್ಕದಲ್ಲಿ ಯಂತ್ರಗಳು ಮಾಡುತ್ತಿವೆ. ಕೇವಲ ಒಬ್ಬ ರೈತ ಹೊಲದಲ್ಲಿ ಇದ್ದರೆ ಯಂತ್ರಗಳು ಕಟಾವು ಮಾಡಿ ನೇರವಾಗಿ ಚೀಲಗಳಿಗೆ ಧಾನ್ಯಗಳನ್ನು ತುಂಬುತ್ತಿವೆ. ಕಟಾವು ಮಾಡಿದ ಮೆದೆ ಹುಲ್ಲನ್ನು ಹೊರೆ ಕಟ್ಟುವ ಯಂತ್ರಗಳು ಒಂದೇ ಗಂಟೆಯಲ್ಲಿ ಕೆಲಸ ಮುಗಿಸುತ್ತಿವೆ. ಇದರಿಂದ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ರೈತರ ಕಣ ಸಂಸ್ಕೃತಿ ಮಾಯವಾಗಿದೆ. ಇದರ ಜತೆ ರೈತ, ರೈತರು, ಕೂಲಿಕಾರ್ಮಿಕರ ನಡುವಿನ ಬಾಂಧವ್ಯ ಮರೆಯಾಗಿದೆ ಎನ್ನುತ್ತಾರೆ ಹಿರಿಯ ರೈತರು.
ರಾಗಿ ಹುಲ್ಲನ್ನು ರೋಣಗಲ್ಲು ಹೊಡೆದು ನಂತರ ರಾಸುಗಳನ್ನು ಮೇಟಿಗೆ ಕಟ್ಟಿ ಚನ್ನಾಗಿ ತುಳಿಸಲಾಗುತ್ತಿತ್ತು. ಹುಲ್ಲಿನಿಂದ ಕಾಳು ಬೇರ್ಪಡದಿದ್ದರೆ ಈಚಲು ಕಡ್ಡಿಗಳಿಂದ ಬಡಿದು ಹುಲ್ಲನ್ನು ಮೇವಿಗಾಗಿ ಬಣವೆ ಮಾಡಲಾಗುತ್ತಿತ್ತು. ಈಗ ಎಲ್ಲಿಯೂ ಕಣಗಳೇ ಕಾಣುತ್ತಿಲ್ಲ.ಜಯಣ್ಣ, ರಂಗನಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.