ತುಮಕೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನದ ಕುರಿತು ತರಬೇತಿ ನೀಡಲು ಸರ್ಕಾರ ರೂಪಿಸಿದ ‘ಸ್ಫೂರ್ತಿಯ ನಡೆ’ ಕಾರ್ಯಕ್ರಮ 3 ತಿಂಗಳಿಗೆ ಸೀಮಿತವಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು. ಜಿಲ್ಲೆಯಲ್ಲಿ 2024ರ ಡಿಸೆಂಬರ್‌ನಿಂದ 2025ರ ಫೆಬ್ರುವರಿ ತನಕ ತರಬೇತಿ ನೀಡಲಾಗಿದೆ. 2025–26ನೇ ಸಾಲಿನಲ್ಲಿ ಕಾರ್ಯಕ್ರಮ ಮುಂದುವರಿಸಲು ಹಣ ಮೀಸಲಿಟ್ಟಿಲ್ಲ. ಹೀಗಾಗಿ ಕಾರ್ಯಕ್ರಮ ಮುಂದುವರಿಸುವ, ಸ್ಥಗಿತಗೊಳಿಸುವ ಕುರಿತು ಸ್ಪಷ್ಟನೆ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರ 62 ಹಾಸ್ಟೆಲ್‌ಗಳಿವೆ. ಎಲ್ಲ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಮೂರು ತಿಂಗಳು ತರಬೇತಿ ನೀಡಲಾಗಿದೆ. ಇದಕ್ಕಾಗಿ ಸರ್ಕಾರದಿಂದ ₹9 ಲಕ್ಷ ಬಿಡುಗಡೆಯಾಗಿತ್ತು. ಇದರಲ್ಲಿ ₹3.6 ಲಕ್ಷ ವೆಚ್ಚವಾಗಿದೆ. ಉಳಿದ ಹಣವನ್ನು ಕಳೆದ ಆರ್ಥಿಕ ವರ್ಷದ ಅಂತ್ಯದಲ್ಲಿ ಸರ್ಕಾರಕ್ಕೆ ಮರು ಪಾವತಿ ಮಾಡಲಾಗಿದೆ. ಇದರಿಂದ ಕಾರ್ಯಕ್ರಮ ಮುಂದುವರಿಸಲು ಇಲಾಖೆಯಲ್ಲಿ ಅನುದಾನದ ಕೊರತೆ ಎದುರಾಗಿದೆ.
ವಾರಕ್ಕೆ 4 ದಿನ ಸ್ಪೋಕನ್ ಇಂಗ್ಲಿಷ್ ತರಗತಿ, ಪ್ರತಿ ಭಾನುವಾರ ‘ವ್ಯಕ್ತಿತ್ವ ವಿಕಸನ’ ಕಾರ್ಯಕ್ರಮ ನಡೆಯುತ್ತಿತ್ತು. ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರನ್ನು ತರಬೇತಿಗೆ ನಿಯೋಜಿಸಲಾಗಿತ್ತು. ತಿಂಗಳಿಗೆ ₹3 ಸಾವಿರ ಗೌರವ ಧನ ನಿಗದಿ ಪಡಿಸಲಾಗಿತ್ತು. ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಸಿ ಕೊಡುವವರಿಗೆ ತಿಂಗಳಿಗೆ ₹1,400 ಗೌರವಧನ ನೀಡಲಾಗುತ್ತಿತ್ತು. ತರಬೇತಿಯಿಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆ ಸುಲಭವಾಗಿತ್ತು.
ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತೆ, ನಾಗರಿಕ ಹಕ್ಕು ಮತ್ತು ಜವಾಬ್ದಾರಿ, ಕಾನೂನು ಸುರಕ್ಷತೆ, ಪ್ರಾಥಮಿಕ ಚಿಕಿತ್ಸೆ, ಉತ್ತಮ ಆಹಾರ ಸೇವನೆ ಕುರಿತು ತಿಳಿಸಿಕೊಡಲಾಗುತ್ತಿತ್ತು. ಕಂಪ್ಯೂಟರ್ ಜ್ಞಾನದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಪವರ್ ಪಾಯಿಂಟ್, ಎಕ್ಸ್‌ಎಲ್, ವರ್ಡ್ ಕುರಿತು ವಿದ್ಯಾರ್ಥಿಗಳು ಕಲಿಯುತ್ತಿದ್ದರು.
ಕಳೆದ ವರ್ಷ ಸೆಮಿಸ್ಟರ್ ಪರೀಕ್ಷೆ ಆರಂಭದಲ್ಲಿಯೇ ತರಬೇತಿ ಶುರು ಮಾಡಿದ್ದರು. ತುಂಬಾ ಜನ ತರಗತಿಗಳಿಂದ ಹೊರಗುಳಿದಿದ್ದರು. ಪರೀಕ್ಷೆ ಮುಗಿದ ನಂತರ ಹಾಜರಾದರೆ ಉತ್ತಮ ಎಂದು ಭಾವಿಸಿದ್ದರು. ನಂತರ ಇಲಾಖೆಯಿಂದ ಅರ್ಧಕ್ಕೆ ತರಬೇತಿ ಮೊಟಕುಗೊಳಿಸಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ನಿರಾಸೆ ಎದುರಾಗಿದೆ. ಮತ್ತೆ ಹೊಸದಾಗಿ ತರಬೇತಿ ಶುರು ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮೂರು ತಿಂಗಳಿನಿಂದ ಹೇಳುತ್ತಿದ್ದಾರೆ. ಇದುವರೆಗೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ.
ಉಸ್ತುವಾರಿ ಸಚಿವರ ಸೂಚನೆ
ಕಳೆದ ತಿಂಗಳ ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮೈದಾಳ ಬಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಭೇಟಿ ನೀಡಿದ್ದರು. ಈ ವೇಳೆ ತರಬೇತಿ ಸ್ಥಗಿತದ ವಿಷಯ ಅವರ ಗಮನಕ್ಕೆ ಬಂದಿತ್ತು. ‘ಕೂಡಲೇ ತರಗತಿ ಆರಂಭಿಸಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಅಗತ್ಯ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದು ಬೇಡ’ ಎಂದು ಸೂಚಿಸಿದ್ದರು. ಅವರು ಸೂಚನೆ ನೀಡಿ ಒಂದೂವರೆ ತಿಂಗಳು ಕಳೆದರೂ ತರಬೇತಿ ಆರಂಭಿಸಿಲ್ಲ. ‘ಈಗಾಗಲೇ ಪದವಿ ಸ್ನಾತಕೋತ್ತರ ಪದವಿ ಪರೀಕ್ಷೆ ಶುರುವಾಗಿದೆ. ಪರೀಕ್ಷೆ ಮುಗಿದ ನಂತರ ರಜೆ ಇರಲಿದೆ. ರಜೆ ಮುಗಿಸಿಕೊಂಡು ಮತ್ತೆ ಹಾಸ್ಟೆಲ್‌ಗೆ ಮರಳುವ ಹೊತ್ತಿಗೆ ತರಬೇತಿ ಪ್ರಾರಂಭಿಸಿದರೆ ತುಂಬಾ ಅನುಕೂಲವಾಗುತ್ತದೆ’ ಎಂದು ಹಾಸ್ಟೆಲ್ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.