ADVERTISEMENT

ಪರೀಕ್ಷಾ ಕೇಂದ್ರ ಸಿದ್ಧತೆಗೆ ಸೂಚನೆ

ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 17:03 IST
Last Updated 3 ಜೂನ್ 2020, 17:03 IST

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 25ರಿಂದ ನಡೆಯಲಿದ್ದು, ಯಾವುದೇ ಪರೀಕ್ಷಾ ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಬಳಸಬಾರದು. ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮೂರು ದಿನಗಳ ಮುನ್ನವೇ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಜೂನ್ 22ರ ನಂತರ ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‍ಮೆಂಟ್ ವಲಯದೊಳಗೆ ಬಂದರೆ ಅಂತಹ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಾಕಿ ಪರೀಕ್ಷೆಗಳನ್ನು ಮುಂದೂಡಿ ಪೂರಕ ಪರೀಕ್ಷೆ ಸಮಯದಲ್ಲಿ ಪ್ರಥಮಅವಕಾಶವೆಂದು ಪರಿಗಣಿಸಿ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ತಿಳಿಸಿದರು.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಕೆಎಸ್‌ಆರ್‌ಟಿಸಿ, ಜಿಲ್ಲಾಡಳಿತ ಸೂಚಿಸಿದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷೆಗೆ ಹಾಜರಾಗುವ ಮಕ್ಕಳು ರಾಜ್ಯದ ಹೊರಗೆ ವಲಸೆ ಹೋಗಿದ್ದರೆ ಅಥವಾ ಗಡಿ ರಾಜ್ಯದಲ್ಲಿ ಉಳಿದುಕೊಂಡಿದ್ದರೆ ಜೂನ್ 25ರಿಂದ ಜುಲೈ 4ರ ವರೆಗೆ ನಡೆಯುವ ಮುಖ್ಯ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಸಿದ್ಧಗಂಗಾ ಮಠ ಸೇರಿದಂತೆ ವಸತಿ ಶಾಲೆಗಳಲ್ಲಿ ಉಳಿದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪಟ್ಟಿಯನ್ನು ತಮಗೆ ಸಲ್ಲಿಸಬೇಕು. ಪುನರ್ಮನನ ತರಗತಿ ನಡೆಸಲು ಅವಕಾಶ ಇಲ್ಲದಿರು ವುದರಿಂದ ಎಸ್ಸೆಸ್ಸೆಲ್ಸಿ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಡಯಟ್‍ನಲ್ಲಿರುವ ವಿಷಯ ನಿರ್ವಾಹಕರು ಕನಿಷ್ಠ 2 ನಿಮಿಷಗಳ ವಿಡಿಯೊ ತಯಾರಿಸಿ ಸಾಮಾಜಿಕ ಜಾಲತಾಣಗಳಿಗೆ ಹಂಚಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಮಂಜುನಾಥ, ಡಿಎಚ್‍ಓ ಡಾ.ನಾಗೇಂದ್ರಪ್ಪ ಇದ್ದರು.

----

ಪರೀಕ್ಷೆಗೆ 37,317 ವಿದ್ಯಾರ್ಥಿಗಳು

ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 723 ಶಾಲೆಗಳ 37,317 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 68 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ತುಮಕೂರಿನ 2, ಮಧುಗಿರಿ 1 ಕೇಂದ್ರದಲ್ಲಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವೆಂದು ಗುರುತಿಸಲಾಗಿದೆ ಎಂದು ಡಿಡಿಪಿಐಗಳಾದ ಎಂ.ಆರ್.ಕಾಮಾಕ್ಷಿ, ರೇವಣ್ಣ ಸಿದ್ದಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.