ADVERTISEMENT

ಕಾಂಗ್ರೆಸ್ ನಾಯಕರು ರೈತರ ಪರವಾಗಿ ನಿಲ್ಲಿ: ಬಿಜೆಪಿ ನಾಯಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 11:30 IST
Last Updated 4 ಜೂನ್ 2025, 11:30 IST
ಗುಬ್ಬಿ ತಾಲ್ಲೂಕಿನ ಸುಂಕಾಪುರ ಸಮೀಪ ನಡೆಯುತ್ತಿರುವ ಕಾಮಗಾರಿಯನ್ನು ಮಂಗಳವಾರ ಬಿಜೆಪಿ ನಾಯಕರಾದ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ, ಬಿ.ಸುರೇಶ್‌ಗೌಡ ವೀಕ್ಷಿಸಿದರು
ಗುಬ್ಬಿ ತಾಲ್ಲೂಕಿನ ಸುಂಕಾಪುರ ಸಮೀಪ ನಡೆಯುತ್ತಿರುವ ಕಾಮಗಾರಿಯನ್ನು ಮಂಗಳವಾರ ಬಿಜೆಪಿ ನಾಯಕರಾದ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ, ಬಿ.ಸುರೇಶ್‌ಗೌಡ ವೀಕ್ಷಿಸಿದರು   

ಗುಬ್ಬಿ (ತುಮಕೂರು): ಕಾಂಗ್ರೆಸ್ ನಾಯಕರು ಅಧಿಕಾರದ ಅಮಲಿನಿಂದ ಹೊರಬಂದು ರೈತರ ಪರವಾಗಿ ನಿಲ್ಲಬೇಕು. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕು ಎಂದು ಬಿಜೆಪಿ ರಾಜ್ಯ ನಾಯಕರು ಒತ್ತಾಯಿಸಿದರು.

ತಾಲ್ಲೂಕಿನ ಸುಂಕಾಪುರ ಸಮೀಪ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮಂಗಳವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ, ‘ರಾಜ್ಯ ಸರ್ಕಾರ ಈ ಭಾಗದ ರೈತರ ಹಕ್ಕು ಕಿತ್ತುಕೊಳ್ಳಲು ಹೊರಟಿದೆ. ಹೋರಾಟ ಹತ್ತಿಕ್ಕಲು ಮುಂದಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಠಾಧೀಶರನ್ನು ಬಂಧಿಸುತ್ತಿದೆ. ರೈತರ ಹೋರಾಟವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಸರ್ವಪಕ್ಷಗಳ ಸಭೆ ಕರೆದು, ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕಾಮಗಾರಿ ನಿಲ್ಲಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಬೇಕು. ಯಾರಿಗೋ ನ್ಯಾಯ ಕೊಡಲು ಹೋಗಿ, ತುಮಕೂರು ಭಾಗದ ರೈತರಿಗೆ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿದರು.

ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ರೈತರು ಮತ್ತೊಮ್ಮೆ ಬೀದಿಗೆ ಇಳಿದರೆ ಸರ್ಕಾರದ ಬುಡ ಅಲುಗಾಡುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ‘ನೀರು ಬೆಂಕಿಯಾಗುವ ಮೊದಲು ಎಚ್ಚೆತ್ತುಕೊಳ್ಳಿ. 35 ವರ್ಷಗಳ ಹಿಂದೆ ಇದೇ ನೀರಿನ ವಿಚಾರ ತುಮಕೂರಿನ ರಾಜಕೀಯವನ್ನೇ ಬದಲಾವಣೆ ಮಾಡಿತ್ತು ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.

‘ಸಚಿವ ಜಿ.ಪರಮೇಶ್ವರ ಹಿರಿಯರಿದ್ದೀರಿ, ಏಕೆ ಹೆದರಿಕೊಳ್ಳುತ್ತಿದ್ದೀರಿ? ಬ್ಲಾಕ್ ಮೇಲ್‌ಗೆ ಹೆದರುವ ಅಗತ್ಯವಿಲ್ಲ. ಜನಾಕ್ರೋಶ ನಿಮ್ಮ ವಿರುದ್ಧ ತಿರುಗುವ ಮೊದಲು ಎಚ್ಚೆತ್ತುಕೊಳ್ಳಿ. ಸರ್ವಾಧಿಕಾರಿಯಾಗಿ ವರ್ತಿಸಬೇಡಿ. ಕತ್ತಲಲ್ಲಿ ಇಟ್ಟು ಅರೆಬರೆ ಮಾಹಿತಿ ನೀಡಿ ಕಾಮಗಾರಿ ಮಾಡಬೇಡಿ. ಮೂಲ ಯೋಜನೆ ಏನು, ಬದಲಾಯಿಸಿದ ಯೋಜನೆ ಯಾವುದು ಎಂಬುದನ್ನು ಜನರಿಗೆ ತಿಳಿಸಿ. ಹೋರಾಟಗಾರರ ಮೇಲೆ ಕೇಸು ಹಾಕುತ್ತಿದ್ದೀರಿ? ಎಷ್ಟು ಜನರ ಮೇಲೆ ಹಾಕುತ್ತೀರಿ, ಜೈಲ್ ಭರೋ ಚಳವಳಿಗೆ ತಯಾರಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾಯಂಗಿಲ್ಲ ಬದುಕಂಗಿಲ್ಲ

‘ಇವರು (ತುಮಕೂರು ಭಾಗದ ರೈತರು) ಸಾಯಬಾರದು ಅವರು (ಕುಣಿಗಲ್ ಭಾಗದವರು) ಬದುಕಬಾರದು ಎಂಬ ಉದ್ದೇಶವನ್ನು ಸರ್ಕಾರ ಹೊಂದಿದಂತೆ ಕಾಣುತ್ತದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಸ್ವಾಮೀಜಿಗಳ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಅವರೇನು ಕಳ್ಳತನ ಮಾಡಿದ್ದಾರೆಯೆ? ಗೂಂಡಾ ವರ್ತನೆ ತೋರುವುದನ್ನು ಮೊದಲು ನಿಲ್ಲಿಸಿ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆ ವಾಪಸ್ ಪಡೆಯಬೇಕು. ಹಿಟ್ಲರ್ ಧೋರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.