ADVERTISEMENT

ತುಮಕೂರು | ಹಣ ವಾಪಸ್‌: ಎಸ್‌ಬಿಐಗೆ ಆದೇಶ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:12 IST
Last Updated 24 ಸೆಪ್ಟೆಂಬರ್ 2025, 7:12 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಮಾಹಿತಿ ನೀಡದೆ ಕಡಿತ ಮಾಡಿರುವ ಹಣವನ್ನು ವಾಪಸ್ ಮಾಡುವಂತೆ ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಬೆಂಗಳೂರಿನ ಬಾಣಸವಾಡಿ ಶಾಖೆಯ ಹಿರಿಯ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ನಗರ ಹನುಮಂತಪುರ ರಸ್ತೆಯ ಆದರ್ಶ ನಗರದ ಬ್ಯಾಂಕ್ ಗ್ರಾಹಕ ಎಂ.ಎನ್.ಕುಮಾರಸ್ವಾಮಿ ಎಂಬುವರಿಗೆ ₹38 ಸಾವಿರ ಹಣದ ಜತೆಗೆ ಶೇ 9ರಷ್ಟು ಬಡ್ಡಿ ಸೇರಿಸಿ ನೀಡಬೇಕು. ₹15 ಸಾವಿರ ಪರಿಹಾರ ಹಾಗೂ ₹8 ಸಾವಿರ ನ್ಯಾಯಾಲಯ ವೆಚ್ಚವಾಗಿ ನೀಡುವಂತೆ ಆಯೋಗ ನೀಡಿರುವ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ?: ಎಸ್‌ಬಿಐ ಬೆಂಗಳೂರು ಬಾಣಸವಾಡಿ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಎಂ.ಎನ್.ಕುಮಾರಸ್ವಾಮಿ ಹೊಂದಿದ್ದಾರೆ. 19–09–2023ರಿಂದ 02–10–2023 ಅವಧಿಯಲ್ಲಿ ಅವರ ಬ್ಯಾಂಕ್ ಖಾತೆಯಿಂದ ವಿವಿಧ ಹಂತದಲ್ಲಿ ₹47 ಸಾವಿರ ಕಡಿತವಾಗಿದೆ. ಆಧಾರ್ ಸಂಖ್ಯೆಯನ್ನು (ಎಇಪಿಎಸ್ ಮೂಲಕ) ಬಳಸಿಕೊಂಡು ಹಣ ಪಡೆದುಕೊಳ್ಳಲಾಗಿದೆ. ಮೊದಲ ಬಾರಿಗೆ ಹಣ ಕಡಿತವಾಗಿದ್ದಕ್ಕೆ ಎಸ್‌ಎಂಎಸ್ ಮೂಲಕ ಮಾಹಿತಿ ಸಿಕ್ಕಿದೆ. ನಂತರದ ಹಂತದಲ್ಲಿ ಕಡಿತವಾದ ಹಣಕ್ಕೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿಲ್ಲ.

ADVERTISEMENT

ನಂತರ ಬ್ಯಾಂಕ್‌ಗೆ ಬಂದು ವಿವರ ಪಡೆದುಕೊಂಡಾಗ ಹಣ ಕಡಿತವಾಗಿರುವುದು ಗೊತ್ತಾಗಿದೆ. ತಕ್ಷಣ ಬ್ಯಾಂಕ್‌ನಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಮಾಹಿತಿ ಇಲ್ಲದೆ ಕಡಿತ ಮಾಡಿರುವ ಹಣ ವಾಪಸ್ ಕೊಡುವಂತೆ ಬ್ಯಾಂಕ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಅದರಲ್ಲಿ ₹9 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ₹38 ಸಾವಿರವನ್ನು ಮರಳಿಸಿರಲಿಲ್ಲ.

ಹಣ ವಾಪಸ್ ಕೊಡದ ಎಸ್‌ಬಿಐ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಕುಮಾರಸ್ವಾಮಿ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠ ₹38 ಸಾವಿರ ಹಣವನ್ನು ದೂರುದಾರರಿಗೆ ನೀಡುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.