ADVERTISEMENT

ಅಂತಿಮ ಘಟ್ಟ ತಲುಪಿದ ಕೊಕ್ಕೊ ಟೂರ್ನಿ

ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿ; 20 ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:31 IST
Last Updated 12 ಅಕ್ಟೋಬರ್ 2025, 5:31 IST
ತುಮಕೂರಿನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕ್ರೀಡಾಪಟುವೊಬ್ಬ ಡೈವ್‌ ಹೊಡೆದು ಅಂಕ ಪಡೆದ ಕ್ಷಣ
ಚಿತ್ರಗಳು: ಚಂದನ್‌
ತುಮಕೂರಿನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕ್ರೀಡಾಪಟುವೊಬ್ಬ ಡೈವ್‌ ಹೊಡೆದು ಅಂಕ ಪಡೆದ ಕ್ಷಣ ಚಿತ್ರಗಳು: ಚಂದನ್‌   

ತುಮಕೂರು: ವಿವೇಕಾನಂದ ಕ್ರೀಡಾ ಸಂಸ್ಥೆ ವತಿಯಿಂದ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿ ಅಂತಿಮ ಹಂತ ತಲುಪಿದೆ. ಭಾನುವಾರ ಸೆಮಿಫೈನಲ್‌, ಫೈನಲ್‌ ಪಂದ್ಯಗಳು ನಡೆಯಲಿವೆ.

ಶುಕ್ರವಾರ ಸಂಜೆ ಟೂರ್ನಿಗೆ ಚಾಲನೆ ನೀಡಲಾಯಿತು. ಶನಿವಾರ ಲೀಗ್‌ ಹಂತದ ಪಂದ್ಯಗಳು ನಡೆದವು. ಪುರುಷರ ವಿಭಾಗದಲ್ಲಿ 13, ಮಹಿಳೆಯರ ವಿಭಾಗದಲ್ಲಿ 8 ತಂಡಗಳು ಪಾಲ್ಗೊಂಡಿವೆ. ತುಮಕೂರು, ದಾವಣಗೆರೆ, ಮೈಸೂರು, ರಾಯಚೂರು, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳ ಆಟಗಾರರು ಭಾಗವಹಿಸಿದ್ದಾರೆ.

ಆಯೋಜಕರು ಕ್ರೀಡಾಪಟುಗಳ ವಾಸ್ತವ್ಯಕ್ಕೆ ಅಗತ್ಯ ವ್ಯವಸ್ಥೆ ಮಾಡಿದ್ದಾರೆ. ಜೂನಿಯರ್‌ ಕಾಲೇಜು ಮೈದಾನದ ಮಿನಿ ಕ್ರೀಡಾಂಗಣದಲ್ಲಿ ಎರಡು ಕೊಕ್ಕೊ ಅಂಕಣ ಸಿದ್ಧಪಡಿಸಲಾಗಿದೆ. ಕ್ರೀಡಾಪಟುಗಳ ರಕ್ಷಣೆ ದೃಷ್ಟಿಯಿಂದ ಮ್ಯಾಟ್‌ ಅಳವಡಿಸಲಾಗಿದೆ. ಪಂದ್ಯಾವಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಂದ್ಯಗಳ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯ ಜನ ಸೇರುತ್ತಿದ್ದಾರೆ.

ADVERTISEMENT

ಕ್ರೀಡಾಕೂಟದ ಪ್ರತಿ ಪಂದ್ಯವು ರೋಚಕತೆ ಹೆಚ್ಚಿಸುತ್ತಿದೆ. ಮೊದಲ ಪಂದ್ಯದಿಂದಲೇ ಮೂಡುಬಿದಿರೆಯ ಆಳ್ವಾಸ್‌ ತಂಡಗಳು ಉತ್ತಮ ಪ್ರದರ್ಶನದೊಂದಿಗೆ ಮುನ್ನಡೆಯುತ್ತಿವೆ. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಕುರುಬೂರು ಕೊಕ್ಕೊ ತಂಡದ ಆಟಗಾರ್ತಿಯರು ಪ್ರತಿ ಪಂದ್ಯದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಪಂದ್ಯದಲ್ಲಿ ಅಂಕ ಪಡೆಯಲು ಪ್ರಯತ್ನಿಸಿದ ಆಟಗಾರ

ಮಿಂಚಿದ ವಿಶ್ವಕಪ್‌ ತಾರೆ

ಇದೇ ವರ್ಷದ ಆರಂಭದಲ್ಲಿ ನಡೆದ ಕೊಕ್ಕೊ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮೈಸೂರು ಜಿಲ್ಲೆ ಕುರುಬೂರಿನ ಬಿ.ಚೈತ್ರಾ ಕೊಕ್ಕೊ ಪಂದ್ಯಾವಳಿಯಲ್ಲಿ ಮಿಂಚಿದರು. ಮೊದಲ ಬಾರಿಗೆ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಜಯಿಸಿತ್ತು. ವಿಜೇತ ತಂಡದಲ್ಲಿದ್ದ ಚೈತ್ರಾ ತಮ್ಮ ಆಟದ ಮೂಲಕ ಗಮನ ಸೆಳೆದಿದ್ದರು. ಈಗ ನಗರದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಕುರುಬೂರಿನ ತಂಡದ ಜತೆಗೆ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.