ADVERTISEMENT

₹ 35 ಲಕ್ಷ ಕಳವು ಮಾಡಿದ್ದ 3 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 7:04 IST
Last Updated 13 ಸೆಪ್ಟೆಂಬರ್ 2022, 7:04 IST

ಕೊರಟಗೆರೆ: ನಕಲಿ ಕೀ ಬಳಸಿ ಮನೆಯಲ್ಲಿ ಇಟ್ಟಿದ್ದ ₹ 35.20 ಲಕ್ಷ ನಗದು ದೋಚಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಡ್ರೈವರ್ ಮಂಜುನಾಥ(38), ಬೈರೇನಹಳ್ಳಿಯ ಸಿದ್ದರಾಜು(32) ಮತ್ತು ಮಧುಗಿರಿ ತಾಲ್ಲೂಕು ಪುರವರ ಹೋಬಳಿ ವ್ಯಾಪ್ತಿಯ ವಡ್ಡರಹಳ್ಳಿಯ ಲಕ್ಷ್ಮೀನಾರಾಯಣ(34) ಬಂಧಿತರು. ಆರೋಪಿಗಳಿಂದ ಕಳವು ಮಾಡಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಪಟ್ಟಣದ ಮುಖ್ಯರಸ್ತೆಯ ಶಿವಗಂಗಾ ಚಿತ್ರಮಂದಿರದ ಮುಂಭಾಗದಲ್ಲಿರುವ ಎತ್ತಿಹೊಳೆ ಯೋಜನೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅವಿನಾಶ್ ಎಂಬುವರು ತಾವು ವಾಸಿರುವ ಬಾಡಿಗೆ ಮನೆಯಲ್ಲಿ ಹಣ ಇಟ್ಟಿದ್ದರು. ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದಾಗ ಹಣ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಯಾವುದೇ ಅನುಮಾನ ಬಾರದಂತೆ ಆರೋಪಿಗಳು ಹಣ ದೋಚಿದ್ದರಿಂದ ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ದೂರು ದಾಖಲಿಸಿಕೊಂಡ ಸಿಪಿಐ ಕೆ. ಸುರೇಶ್ ನೇತೃತ್ವದ ತಂಡ ಮಧುಗಿರಿ ಡಿವೈಎಸ್‌ಪಿ ವೆಂಕಟೇಶ ನಾಯ್ಡು ಮಾರ್ಗದರ್ಶನದಲ್ಲಿ ಮೊಬೈಲ್ ಕರೆಯ ಜಾಡು ಹಿಡಿದು ತನಿಖೆ ಕೈಗೊಂಡಾಗ ಆರೋಪಿಗಳ ಸುಳಿವು ಸಿಕ್ಕಿದೆ.

ಅವಿನಾಶ್‌ಗೆ ಪರಿಚಿತನಾಗಿದ್ದ ಡ್ರೈವರ್ ಮಂಜುನಾಥನನ್ನು ತನಿಖೆಗೆ ಒಳಪಡಿಸಿದಾಗ ಆತ ತನ್ನ ಸ್ನೇಹಿತರೊಂದಿಗೆ ಹಣ ದೋಚಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಹಣ ದೋಚಿದ ನಂತರ ಮೂವರು ಹಂಚಿಕೊಂಡು ಉಳಿದ ಹಣವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಮಣ್ಣಿನಲ್ಲಿ ಹೂತಿಟ್ಟಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.