ADVERTISEMENT

ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ; ಬಿಎಸ್‌ಎನ್‌ಎಲ್ ಕಚೇರಿಗೆ ಮುತ್ತಿಗೆ ಯತ್ನ

ಬಸ್‌ಗಳ ಸಂಚಾರ, ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 12:06 IST
Last Updated 9 ಜನವರಿ 2019, 12:06 IST
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಪ್ರತಿಭಟಿಸಿದ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತೆಯರು
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಪ್ರತಿಭಟಿಸಿದ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತೆಯರು   

ತುಮಕೂರು: ಅಸಂಘಟಿತ ವಲಯದ ಕಾರ್ಮಿಕರಿಗೆ ಸುರಕ್ಷಾ ಕಾಯ್ದೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರ ಹಾಗೂ ಬಂದ್‌ಗೆ ಬುಧವಾರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಬಂದ್ ಕಾವು ಪೂರ್ಣವಾಗಿ ಇಳಿದಿತ್ತು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌, ಆಟೊಗಳ ಸಂಚಾರ ಯಥಾ ಪ್ರಕಾರದಲ್ಲಿ ಇತ್ತು. ಅಂಗಡಿಗಳು ಬಾಗಿಲು ತೆರದಿದ್ದು ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಿತು.

ಬೆಳಿಗ್ಗೆ 9 ಗಂಟೆಯಲ್ಲಿ ಟೌನ್‌ಹಾಲ್ ಬಳಿ ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಜಮಾವಣೆಗೊಂಡರು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ಟೀಕಿಸಿದರು.

ADVERTISEMENT

ಕೇಂದ್ರ ಸರ್ಕಾರ ಅಂಬಾನಿ, ಆದಾನಿ ಅವರ ಪರವಾಗಿದೆ. ಬಡವರು ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದರೂ ಅವರ ಕಲ್ಯಾಣಕ್ಕೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸೇವಾ ಭದ್ರತೆ ಒದಗಿಸಬೇಕು. ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿ ಯೋಜನೆಗಳನ್ನು ರೂಪಿಸಬೇಕು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್ ವಲಯದ ಪರವಾಗಿದೆ ಎಂದು ಟೀಕಿಸಿದರು.

ನಂತರ ಎಂ.ಜಿ.ರಸ್ತೆ ಮೂಲಕ ಮೆರವಣಿಗೆ ಸಾಗಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂದೆ ಜಮಾಯಿಸಿದ ಪ್ರತಿಭಟನಕಾರರು ಬಸ್‌ಗಳಿಗೆ ತಡೆಯೊಡ್ಡಲು ಮುಂದಾದರು. ಆಗ ಪೊಲೀಸರು ತಡೆಯೊಡ್ಡಿದರು. ಬಿಎಸ್‌ಎನ್‌ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನನಾರರನ್ನು ಪೊಲೀಸರು ಬಂಧಿಸಿದರು.

ಮುಖಂಡರಾದ ಸೈಯದ್ ಮುಜೀಬ್, ಸುಬ್ರಹ್ಮಣ್ಯ, ಅಜ್ಜಪ್ಪ, ಶಿವಣ್ಣ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.