ತುಮಕೂರು ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ನಂಜಯ್ಯ ಅವರನ್ನು ಮುದ್ದೇನಹಳ್ಳಿ ಗ್ರಾಮದಲ್ಲಿ ಬುಧವಾರ ಅಭಿನಂದಿಸಿ ಆಹ್ವಾನ ನೀಡಲಾಯಿತು.
ತುಮಕೂರು: ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಮುದ್ದೇನಹಳ್ಳಿ ಗ್ರಾಮದ ನಂಜಯ್ಯ ಆಯ್ಕೆ ಆಗಿದ್ದಾರೆ.
ತಾಲ್ಲೂಕಿನ ಕೋರಾ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಫೆ. 28ರಂದು ಸಮ್ಮೇಳನ ಆಯೋಜಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅಧ್ಯಕ್ಷತೆಯಲ್ಲಿ ತಾಲ್ಲೂಕು ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ನಂಜಯ್ಯ ಅವರು ಸಿದ್ಧಗಂಗಾ ಮಠದಲ್ಲಿ ಅಧ್ಯಯನ ಮಾಡಿದ್ದು, ಎಂಎ, ಬಿಇಡಿ ಪದವೀಧರರು. ಮಠದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಷಟ್ಪದಿ, ಸಾಂಗತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಷಟ್ಪದಿಯಲ್ಲಿ ‘ಶಿವಕುಮಾರ ಚರಿತಂ’ ಕೃತಿ ಹೊರ ಬಂದಿದೆ. ಶಿವಯೋಗಿ ಸಿದ್ಧರಾಮ, ಹೊನ್ನಾರು, ವಚನ ದೀಪ್ತಿ, ಲಲಿತ ರಗಳೆಯಲ್ಲಿ ಶಿವಬಸವ ಕೃತಿ ರಚಿಸಿದ್ದಾರೆ.
ಸಮ್ಮೇಳನದಲ್ಲಿ ಉಪನ್ಯಾಸ, ವಿಚಾರ ಗೋಷ್ಠಿ, ಕವಿಗೋಷ್ಠಿ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಕೋರಾ ಗ್ರಾಮದ ನರಸಿಂಹಮೂರ್ತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.