
ತುಮಕೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದ ಎಪಿಎಂಸಿ ಮಾರುಕಟ್ಟೆಗೆ ಹೊಸ ಹುಣಸೆ ಹಣ್ಣಿನ ಆವಕ ಶುರುವಾಗಿದೆ. ಸೋಮವಾರ ಬಂದ ಮೊದಲ ಹಣ್ಣಿಗೆ ಪೂಜೆ ಸಲ್ಲಿಸಿ ಹರಾಜು ಪ್ರಕ್ರಿಯೆ ಆರಂಭಿಸಲಾಯಿತು. ಸ್ಥಳೀಯ ವರ್ತಕರ ಮೂಲಕ ತಮಿಳುನಾಡಿನ ವರ್ತಕರು ಮತ್ತು ಮಧ್ಯವರ್ತಿಗಳು ಹುಣಸೆ ಖರೀದಿಸಿದರು.
ಮೊದಲ ದಿನವೇ ಒಂದು ಟನ್ ಹಣ್ಣು ಆವಕವಾಗಿದ್ದು, ಕ್ವಿಂಟಲ್ ಹುಣಸೆ ₹15 ಸಾವಿರದಿಂದ ₹26 ಸಾವಿರದವರೆಗೂ ಮಾರಾಟವಾಯಿತು. ಆರಂಭದಲ್ಲೇ ಉತ್ತಮ ಬೆಲೆ ಸಿಕ್ಕಿರುವುದು ರೈತರ ನಿರೀಕ್ಷೆ ಹೆಚ್ಚಿಸಿದೆ. ಈ ಬಾರಿ ಇಳುವರಿ ಸಾಧಾರಣ ಪ್ರಮಾಣದಲ್ಲಿರುವ ಕಾರಣ ಸಹಜವಾಗಿ ಉತ್ತಮ ಬೆಲೆ ಸಿಗಬಹುದು ಎಂಬುವುದು ವರ್ತಕರ ಅಂದಾಜು.
ಹಿಂದಿನ ವರ್ಷ ₹10 ಸಾವಿರದಿಂದ ₹35 ಸಾವಿರದವರೆಗೂ ಮಾರಾಟವಾಗಿತ್ತು. ಒಮ್ಮೆ ₹40 ಸಾವಿರದ ಗಡಿಯನ್ನೂ ತಲುಪಿತ್ತು. ಕಳೆದ ಸಾಲಿನಲ್ಲಿ ಇಳುವರಿ ಕುಂಠಿತಗೊಂಡಿದ್ದರಿಂದ ಉತ್ತಮ ಬೆಲೆ ಸಿಕ್ಕಿತ್ತು. 2024ರಲ್ಲಿ ಸರಾಸರಿ ಕ್ವಿಂಟಲ್ ₹13 ಸಾವಿರದಿಂದ ₹20 ಸಾವಿರದ ವರೆಗೂ ಮಾರಾಟವಾಗಿತ್ತು.
ಫೆಬ್ರುವರಿ ವೇಳೆಗೆ ಆವಕ ಹೆಚ್ಚಾಗಲಿದ್ದು, ಮಾರ್ಚ್‌ಗೆ ಬಿರುಸು ಪಡೆದುಕೊಳ್ಳಲಿದೆ. ಹಣ್ಣಿನಲ್ಲಿ ತೇವಾಂಶ ಕಡಿಮೆ ಇದ್ದು, ಗುಣಮಟ್ಟ ಚೆನ್ನಾಗಿದ್ದರೆ ಉತ್ತಮ ಬೆಲೆ ಸಿಗಬಹುದು. ಹಿಂದಿನ ವರ್ಷದಷ್ಟೇ ಆವಕ ಬಂದರೆ ಉತ್ತಮ ಬೆಲೆ ನೋಡಬಹುದು. ಆವಕ, ಬೇಡಿಕೆ ಮೇಲೆ ಧಾರಣೆ ನಿರ್ಧಾರವಾಗಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಪ್ರಮುಖ ಹುಣಸೆ ಮಾರುಕಟ್ಟೆಗಳಲ್ಲಿ ಒಂದಾಗಿರುವ ತುಮಕೂರು ಎಪಿಎಂಸಿಯಲ್ಲಿ ನಡೆಯುವ ಹರಾಜಿಗೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶದಿಂದಲೇ ಹೆಚ್ಚಿನ ಸಂಖ್ಯೆಯ ವರ್ತಕರು, ದಲ್ಲಾಳಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ.
ಪ್ರತಿ ವರ್ಷ ಸಾಮಾನ್ಯವಾಗಿ ಫೆಬ್ರುವರಿ ವೇಳೆಗೆ ಹುಣಸೆ ಹಣ್ಣು ಮಾರುಕಟ್ಟೆಗೆ ಬರಲು ಶುರುವಾಗುತ್ತೆ. ಬೇಸಿಗೆ ಬಿಸಿಲು ಹೆಚ್ಚಾದಂತೆ ಆವಕ ಹೆಚ್ಚುತ್ತಾ ಹೋಗುತ್ತದೆ. ಈ ವರ್ಷ ಚಳಿಗಾಲದೊಂದಿಗೆ ಹುಣಸೆ ಮಾರುಕಟ್ಟೆಗೆ ಕಾಲಿಟ್ಟಿದೆ ಎಂದು ಎಪಿಎಂಸಿ ವರ್ತಕ ದೇವೇಂದ್ರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.