
ಕುಣಿಗಲ್: ನಿವೇಶನ ಮತ್ತು ಮನೆಗಳ ಇ-ಸ್ವತ್ತು ದಾಖಲೆಗಳಿಗಾಗಿ ಗ್ರಾಮೀಣ ಪ್ರದೇಶದ ರೈತರು ನಿತ್ಯ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಭೇಟಿ ನೀಡಿ ಅಧಿಕಾಗಳನ್ನು ವಿಚಾರಿಸುವ ಪರಿಪಾಠ ಹೆಚ್ಚಾಗಿದ್ದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ರಾಜ್ಯ ಸರ್ಕಾರ ಇ– ಸ್ವತ್ತು ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ಅಧಿಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 15 ದಿನದಲ್ಲಿ ಇ– ಖಾತೆ ವಿತರಣೆ ಮಾಡುವುದಾಗಿ ತಿಳಿಸಿತ್ತು.
ತಾಲ್ಲೂಕಿನ 36 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 92,355 ಆಸ್ತಿಗಳಿದ್ದು, ಮೊದಲ ಆವೃತ್ತಿಯಲ್ಲಿ 3,82,177 ಆಸ್ತಿಗಳ ಇ-ಸ್ವತ್ತು ಪಡೆಯಲಾಗಿದೆ. ಎರಡನೇ ಆವೃತ್ತಿಗೆ 54,138 ಆಸ್ತಿಗಳು ಬಾಕಿ ಉಳಿದಿವೆ. ಪುರಸಭೆ ವ್ಯಾಪ್ತಿಯಲ್ಲಿ 10,200 ಆಸ್ತಿಗಳಿದ್ದು ಮೊದಲ ಆವೃತ್ತಿಯಲ್ಲಿ ನಾಲ್ಕು ಸಾವಿರ ಇ– ಸ್ವತ್ತು ಪೂರ್ಣಗೊಂಡಿವೆ. 6,000 ಬಾಕಿ ಇದ್ದು, 400 ಅರ್ಜಿಗಳು ಬಾಕಿ ಇದೆ.
ಸಾರ್ವಜನಿಕರ ಆಸ್ತಿ ಭದ್ರತೆ ಮತ್ತು ಸ್ವತ್ತು ರಕ್ಷಣೆಗೆ ರಾಜ್ಯ ಸರ್ಕಾರ ಇ ಸ್ವತ್ತು ವ್ಯವಸ್ಥೆ ಜಾರಿಗೆ ತಂದಿದ್ದು, ಆಸ್ತಿ ದಾಖಲೆಗಳನ್ನು ಪಾರದರ್ಶಕ ಮತ್ತು ಡಿಜಿಟಲ್ ರೂಪದಲ್ಲಿ ಪಡೆಯಲು ಸರ್ಕಾರ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಂತ್ರಿಕ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಯಾರೊಬ್ಬರೂ ಇ– ಖಾತೆ ಪಡೆಯಲು ಸಾಧ್ಯವಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎನ್.ನಟರಾಜು, ಸರ್ಕಾರ ಕೇಳಿರುವ 16 ದಾಖಲೆಗಳನ್ನು ಒದಗಿಸಲು ರೈತರು ಪರದಾಡಬೇಕಿದೆ. ನಂತರ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ವಿವಿಧ ಇಲಾಖೆಯ (ಕಂದಾಯ, ನೊಂದಣಿ) ತಂತ್ರಾಂಶಗಳೊಂದಿಗೆ ಮಾಹಿತಿ ಪಡೆಯುವ ಸಮಯದಲ್ಲಿ ತಾಂತ್ರಿಕ ಅಡಚಣೆ ಪ್ರಾರಂಭವಾಗುತ್ತದೆ. ಪಿಡಿಒ ಪರಿಶೀಲಿಸಿ ನಂತರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿಯಿಂದ ಅನುಮೋದನೆ ಪಡೆಯುವ ಹಂತದಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚಾಗಿ ಇ-ಖಾತೆ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ದೂರಿದ್ದಾರೆ.
ಹಳೇವೂರು ಗ್ರಾಮಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಪ್ರತಿಕ್ರಿಯಿಸಿ, ಇ-ಖಾತೆ ನೀಡುವ ವಿಚಾರದಲ್ಲಿ ಸರ್ಕಾರ ಮೊದಲಬಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಅವಕಾಶ ನೀಡಿತ್ತು. ತರಬೇತಿ ನೀಡಿತ್ತು ಆದರೆ ಪೂರಕ ವಾತಾವರಣ ನಿರ್ಮಿಸಿ ಕೊಡಲು ಸರ್ಕಾರ ವಿಫಲರಾಗಿರುವ ಕಾರಣ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅವಕಾಶ ವಂಚಿತರಾಗಿದ್ದಾರೆ. ಉಳಿದಿರುವ ಅಲ್ಪ ಅವಧಿಯಲ್ಲಾದರೂ ಅವಕಾಶ ನೀಡಬೇಕಿದೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್ ಪ್ರತಿಕ್ರಿಯಿಸಿ, ಸಾಫ್ಟ್‌ವೇರ್ ಸಮಸ್ಯೆಯಾಗಿದೆ. ಪಂಚಾಯಿತಿ ಕಾರ್ಯದರ್ಶಿಯಿಂದ ಅಧ್ಯಕ್ಷ ಲಾಗಿನ್ ನಂತರ ಪಿಡಿಒ ಲಾಗಿನ್‌ನಿಂದ ಇಒ ಲಾಗಿನ್ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದ್ದು, ಶೀಘ್ರದಲ್ಲಿ ಪರಿಹಾರ ಸಿಗಲಿದೆ.
---
ಇ –ಸ್ವತ್ತು ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುತ್ತಿದೆ. ಸಾರ್ವಜನಿಕರು ಗ್ರಾಮ ಪಂಚಾಯಿತಿ ಖಾತಾ ಪಡೆಯಲು ಸಿಟಿಜನ್ ಪೋರ್ಟಲ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.
-ಚಂದ್ರಹಾಸ್ ಇ-ಸ್ವತ್ತು ಜಿಲ್ಲಾ ಮಾಸ್ಟರ್ ಟ್ರೈನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.