ADVERTISEMENT

ತುಮಕೂರು: ಮಾರುವೇಷದಲ್ಲಿ ಆಂಬುಲೆನ್ಸ್ ಸೇವೆ ಪರಿಶೀಲಿಸಿದ ತಹಶೀಲ್ದಾರ್ ನಹಿದಾ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 7:10 IST
Last Updated 13 ಡಿಸೆಂಬರ್ 2022, 7:10 IST
ನಹಿದಾ ಜಮ್ ಜಮ್
ನಹಿದಾ ಜಮ್ ಜಮ್   

ಕೊರಟಗೆರೆ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಹಿದಾ ಜಮ್ ಜಮ್‌ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಗ್ಯ ಇಲಾಖೆಯ ಲೋಪವನ್ನು ಬಯಲಿಗೆಳೆದಿದ್ದಾರೆ.

ಶನಿವಾರ ಬೆಳಿಗ್ಗೆ ತಾಲ್ಲೂಕಿನ ಇರಕಸಂದ್ರ ಕಾಲೊನಿ ಬಳಿ ಇಬ್ಬರು ಬಾಲಕರು, ಒಬ್ಬ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿತ್ತು. ಈ ವೇಳೆ ಗ್ರಾಮಸ್ಥರು ತುರ್ತು ವಾಹನಕ್ಕಾಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆ ಮಾಡಿದ್ದರು. ಆಂಬುಲೆನ್ಸ್ ಇದ್ದರೂ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಕರೆ ಕಡಿತಗೊಳಿಸಿ ನಿರ್ಲಕ್ಷ್ಯ ತೋರಿದ್ದರು. ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಹರಸಾಹಸಪಡಬೇಕಾಯಿತು.

ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್‌ ಸೇವೆ ಒದಗಿಸುವಲ್ಲಿ ಪ್ರತಿ ಬಾರಿಯೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಭಾನುವಾರ ಗಾಯಾಳುಗಳನ್ನು ಭೇಟಿ ಮಾಡಿದ ಶಾಸಕ ಡಾ.ಜಿ. ಪರಮೇಶ್ವರ ಎದುರು ದೂರಿದ್ದರು.

ADVERTISEMENT

ಇದನ್ನು ಮನಗಂಡ ತಹಶೀಲ್ದಾರ್ ಭಾನುವಾರ ಸಂಜೆ ಸಾರ್ವಜನಿಕರಂತೆ ರಾಮಕ್ಕ ಎಂಬ ಹೆಸರಿನಲ್ಲಿ ವಡ್ಡಗೆರೆ ರಸ್ತೆಯಲ್ಲಿ ಇಬ್ಬರಿಗೆ ಅಪಘಾತವಾಗಿದೆ ಎಂದು ತುರ್ತುಸೇವೆಗಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಸಿಬ್ಬಂದಿ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಆಂಬುಲೆನ್ಸ್ ಬರಲು ಒಂದು ಗಂಟೆ ತಡವಾಗುತ್ತದೆ ಎಂದು ಹಾರಿಕೆ ಉತ್ತರ ನೀಡಿ ಕರೆ ಕಟ್ ಮಾಡಿದ್ದಾರೆ.

ತಹಶೀಲ್ದಾರ್ ಜೊತೆಯಲ್ಲಿ 8 ನಿಮಿಷ ಸಂಭಾಷಣೆ ಮಾಡಿದ್ದಾರೆ. ಈ ವೇಳೆ ರಾಮಕ್ಕ ಹೆಸರಿನಲ್ಲಿ ತಹಶೀಲ್ದಾರ್ ಎಷ್ಟೇ ಮನವಿ ಮಾಡಿದರೂ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಉತ್ತರಿಸಿದ್ದಾರೆ. 20 ರಿಂದ 25 ನಿಮಿಷದಲ್ಲಿ ಬರಬಹುದಾದ ದೂರಕ್ಕೆ 1 ಗಂಟೆ ತಡವಾಗುತ್ತದೆ ಎಂದು ಹೇಳಿದ್ದಾರೆ.

ಬಳಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನಹಿದಾ ಆಸ್ಪತ್ರೆ ಸೇವೆಯನ್ನು ಪರಿಶೀಲಿಸಿದರು. ಘಟನೆ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಯೊಂದಿಗೆ ಚರ್ಚಿಸಿ ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ತುರ್ತು ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಆಸ್ಪತ್ರೆಯ ಆಂಬುಲೆನ್ಸ್ ಸೇವೆ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿದ್ದವು. ಖಾಸಗಿಯವರೊಂದಿಗೆ ಶಾಮೀಲಾಗಿ ಆಂಬುಲೆನ್ಸ್ ಸೇವೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಪತ್ತೆಗೆ ರಾಮಕ್ಕ ಎಂಬ ಹೆಸರಿನಲ್ಲಿ ನಾನೇ ಸಾರ್ವಜನಿಕರಂತೆ ಕರೆ ಮಾಡಿದಾಗ ನೈಜ ಸ್ಥಿತಿ ಗೊತ್ತಾಯಿತು. ಜನರಿಗೆ ಸರ್ಕಾರಿ ಆಸ್ಪತ್ರೆ ಸೇವೆ ಇನ್ನೂ ಸರಿಯಾಗಿ ಸಿಗುತ್ತಿಲ್ಲ ಎಂಬುದು ಅರಿವಾಯಿತು. ಇದರಿಂದ ಬಹಳ ಬೇಸರವಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ವರದಿ ಸಲ್ಲಿಸಿದ್ದೇನೆ’ ಎಂದು ನಹಿದಾ ಜಮ್ ಜಮ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.