ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ ಭಕ್ತರ ನಂಬಿಕೆ ಹಾಗೂ ಶ್ರದ್ಧೆಯ ಕೇಂದ್ರವಾಗಿರುವ ವೀರಭದ್ರೇಶ್ವರ ಹಾಗೂ ಬಿದರಾಂಬಿಕ ದೇವಾಲಯಗಳ ನೂತನ ವಿಮಾನ ಗೋಪುರ ಲೋಕಾರ್ಪಣೆ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಧಾರ್ಮಿಕ ಸಂಸ್ಕೃತಿ ಹಾಗೂ ಗ್ರಾಮೀಣ ಏಕತೆಗೆ ಮಾದರಿಯಾದ ಈ ಮಹೋತ್ಸವಕ್ಕೆ ಭಕ್ತರ ಸಂಭ್ರಮದಿಂದ ಭಾಗವಹಿಸಿದ್ದರು. ಈ ಮಹೋತ್ಸವಕ್ಕೆ ಕೆರೆಗೋಡಿ ರಂಗಾಪುರ ಕ್ಷೇತ್ರದ ಗುರುಪರದೇಶಿಕೇಂದ್ರ ಸ್ವಾಮೀಜಿ ಹಾಗೂ ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಮಾನ ಗೋಪುರಕ್ಕೆ ಕಳಸ ಹಸ್ತಾಂತರಿಸಿದರು.
ಕರಿಕೆರೆ ಬ್ರಹ್ಮಲಿಂಗೇಶ್ವರ, ಬೆಳಗುಂಬ ವೀರಭದ್ರೇಶ್ವರ, ರಾಮನಹಳ್ಳಿ ಮಲ್ಲಿಕಾರ್ಜುನಸ್ವಾಮಿ, ಅಮ್ಮನಹಟ್ಟಿ ಮಾಳಮ್ಮದೇವಿ, ಮತ್ತಿಹಳ್ಳಿ ಯಲ್ಲಮ್ಮದೇವಿ ಹಾಗೂ ಮಡೆನೂರು ಗೌಡನಕಟ್ಟೆ ಬಿದರಾಂಬಿಕ ದೇವಿ ಪ್ರತಿಮೆ ಮೆರವಣಿಗೆ ಗ್ರಾಮಕ್ಕೆ ಭೇಟಿ ನೀಡಿದ್ದವು.
ನಂದಿ ದ್ವಜಾರೋಹಣ, ನಂದಿ ಧ್ವಜ ಕುಣಿತ, ಹೋಮ ಹವನ, ಕಳಸ ಪೂಜೆ, ಮಣೇವು ನಡೆಯಿತು. ಮಹೋತ್ಸವ ಅಂಗವಾಗಿ ಗ್ರಾಮಸ್ಥರು ಹಾಗೂ ಭಕ್ತರ ಸಹಭಾಗಿತ್ವದಲ್ಲಿ ಶನಿವಾರ ಸಂಜೆಯಿಂದ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಸತ್ಕಾರ ಸ್ವೀಕರಿಸಿದರು.
ಮಹೋತ್ಸವಕ್ಕೆ ಮತ್ತಿಹಳ್ಳಿ ಮಾತ್ರವಲ್ಲದೆ ಸುತ್ತಲಿನ ನೂರಕ್ಕೂ ಹೆಚ್ಚು ಗ್ರಾಮಗಳಿಂದ ಭಕ್ತರು ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.