ADVERTISEMENT

ಅನಿರ್ದಿಷ್ಟಾವಧಿ ಧರಣಿ ಆರಂಭ

ಭೂಮಾಫಿಯಾಗೆ ಸಾಗುವಳಿ ಚೀಟಿ; ಅಕ್ಕಾಜಿಹಳ್ಳಿ ರೈತರಿಗೆ ಅನ್ಯಾಯ– ಆರೋಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:46 IST
Last Updated 19 ಜನವರಿ 2021, 2:46 IST
ಕೊರಟಗೆರೆ ತಾಲ್ಲೂಕು ಕಚೇರಿ ಎದುರು ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ
ಕೊರಟಗೆರೆ ತಾಲ್ಲೂಕು ಕಚೇರಿ ಎದುರು ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ   

ಕೊರಟಗೆರೆ: ‘ತಾಲ್ಲೂಕಿನ ಅಕ್ಕಾಜಿಹಳ್ಳಿಯಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಬೆಂಗಳೂರಿನಿಂದ ಬಂದ ಭೂಮಾಫಿಯಾದವರಿಗೆ ಸರ್ಕಾರದ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿ ತಾಲ್ಲೂಕು ಆಡಳಿತ ಸಾಗುವಳಿ ಚೀಟಿ ನೀಡುವ ಮೂಲಕ ಸ್ಥಳೀಯ ರೈತರಿಗೆ ಅನ್ಯಾಯ ಮಾಡಲಾಗಿದೆ’ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೀಲ್ ಹುಲಿಕಟ್ಟೆ ಮಾತನಾಡಿ, ‘ತಾಲ್ಲೂಕಿನ ಅಕ್ಕಾಜಿಹಳ್ಳಿ ಸರ್ವೆ ನಂ.33ರಲ್ಲಿ ಅಲ್ಲಿನ ಸ್ಥಳೀಯ ರೈತರಾದ ದಾಳಿನರಸಪ್ಪ ಹಾಗೂ ಕಾಮಣ್ಣ ಕಳೆದ 30-40 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿದ್ದರು. ಈ ಸಂಬಂಧ ಅವರು ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿಕೊಂಡು ಅದಕ್ಕೆ ಕಿಮ್ಮತ್ತನ್ನು ಕೂಡ ಕಟ್ಟಿ ವ್ಯವಸಾಯ ಮಾಡುತ್ತಿದ್ದರು. ಸದರಿ ರೈತರ ಜಮೀನಿನನ್ನು ತಾಲ್ಲೂಕಿನ ವಾಸಿಗಳಲ್ಲದವರಿಗೆ ಏಕಾಏಕಿ ಸಾಗುವಳಿ ಚೀಟಿ ನೀಡಲಾಗಿದೆ. ಈ ವೇಳೆಯಲ್ಲಿ ಸರ್ಕಾರದ ಎಲ್ಲಾ ಮಾನದಂಡಗಳನ್ನು ಉಲ್ಲಂಘನೆ ಮಾಡಲಾಗಿದೆ’ ಎಂದು ದೂರಿದರು.

‘ಸ್ಥಳೀಯವಾಗಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇದ್ಯಾವುದು ಇಲ್ಲವರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಬೆಂಗಳೂರಿನವರಿಗೆ ನೀಡಿರುವ ಸಾಗುವಳಿ ಚೀಟಿಯಲ್ಲಿ 2017ನೇ ವರ್ಷ ನಮೂದಾಗಿದೆ. ಆದರೆ ಅದಕ್ಕೆ ಕಿಮ್ಮತ್ತು ಕಟ್ಟಿಸಿಕೊಂಡಿರುವ ದಾಖಲೆಯಲ್ಲಿ 2018 ದಿನಾಂಕ ನಮೂದಾಗಿದೆ. ಇದನ್ನು ಗಮನಿಸಿದರೆ ತಾಲ್ಲೂಕು ಆಡಳಿತದ ಅಧಿಕಾರಿಗಳು ಭೂಮಾಫಿಯಾಗೆ ಮಣಿದು ರೈತರ ಜಮೀನಿಗೆ ಅಕ್ರಮವಾಗಿ ದಾಖಲೆ ಸೃಷ್ಟಿಸಿರುವುದು ಕಾಣುತ್ತದೆ. ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರನ್ನು ಏಕಾಏಕಿ ಒಕ್ಕಲೆಬ್ಬಿಸಿ ಗೂಂಡಾಗಳನ್ನು ಬಿಟ್ಟು ಎದರಿಸುವ ಕೆಲಸ ಭೂಮಾಫಿಯಾದವರು ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಈ ಬಗ್ಗೆ ನ್ಯಾಯ ಕೇಳಲು ಹೋದಾಗ ಕಂದಾಯ ಇಲಾಖೆ ಅಧಿಕಾರಿಗಳೂ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ರೈತರನ್ನೇ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಉಪವಿಭಾಗಾಧಿಕಾರಿ ಅವರಿಗೆ ಮನವಿ ಮಾಡಿದರೂ ಇಲ್ಲಿವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ನ್ಯಾಯ ಕೇಳಲು ಬಂದ ರೈತರ ಪ್ರಕರಣ ದಾಖಲಿಸುವಂತ ಕೆಲಸ ಮಾಡಲಾಗಿದೆ. ಶೀಘ್ರವಾಗಿ ನ್ಯಾಯ ದೊರಕಿಸದಿದ್ದಲ್ಲಿ ಬೃಹತ್ ಚಳವಳಿ ಮಾಡಲಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಗೌಡ, ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ರೈತರಾದ ಎಸ್.ಬಸವರಾಜು, ದಾಳಿನರಸಪ್ಪ, ಕಾಮಣ್ಣ, ನರಸಿಂಹರಾಜು, ಬಾಲರಾಜು, ಶಿವಶಂಕರ್, ಮುತ್ತಣ್ಣ, ಇಂದ್ರಕುಮಾರ್, ರಾಜಣ್ಣ, ಪುಟ್ಟರಾಜು, ಗಂಗನರಸಪ್ಪ, ಕ್ಯಾಮಣ್ಣ, ಅನಂತ, ಕುಮಾರ, ಮಂಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.