ADVERTISEMENT

ಅದ್ದೂರಿಯಾಗಿ ನಡೆದ ಗಣೇಶ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:35 IST
Last Updated 26 ಸೆಪ್ಟೆಂಬರ್ 2021, 3:35 IST
ಶಿರಾದಲ್ಲಿ ಶನಿವಾರ ನಡೆದ ಗಣೇಶ ವಿಸರ್ಜನೆಯಲ್ಲಿ ಭಾಗವಹಿಸಿದ್ದ ಜನರು
ಶಿರಾದಲ್ಲಿ ಶನಿವಾರ ನಡೆದ ಗಣೇಶ ವಿಸರ್ಜನೆಯಲ್ಲಿ ಭಾಗವಹಿಸಿದ್ದ ಜನರು   

ಶಿರಾ: ನಗರದ ಗವಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾ ಗಣಪತಿಯನ್ನು ಶನಿವಾರ ಅದ್ದೂರಿ ಮೆರವಣಿಗೆ ನಡೆಸಿ ರಾತ್ರಿ ಜಾಜಮ್ಮನ ಕಟ್ಟೆಯಲ್ಲಿ ವಿಸರ್ಜಿಸಲಾಯಿತು.

ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ ಮೂರನೇ ದಿನ‌ವೇ ವಿಸರ್ಜನೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ಕೊರೊನಾ‌ ನಿಯಮಾವಳಿಯಂತೆ ಮೆರವಣಿಗೆಗೆ ಅವಕಾಶವಿಲ್ಲ. ವಿಸರ್ಜನೆ ಸಮಯದಲ್ಲಿ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡುವುದಾಗಿ ಪೊಲೀಸರು ಷರತ್ತು ವಿಧಿಸಿದಾಗ ಹಿಂದೂ‌ಸಭಾದ ಕಾರ್ಯಕರ್ತರು ಇದನ್ನು ವಿರೋಧಿಸಿ ಗಣೇಶ ವಿಸರ್ಜನೆಯನ್ನು ಅನಿರ್ಧಿಷ್ಟ ಕಾಲಕ್ಕೆ‌ ಮುಂದೂಡಿದ್ದರು.

ಶನಿವಾರ ನಡೆದ ಗಣೇಶ ವಿಸರ್ಜನೆಯ ಮೆರವಣಿಗೆ ಸಮಯದಲ್ಲಿ‌ ಡಿ.ಜೆಗೆ ಪೊಲೀಸರು ಅವಕಾಶ ನೀಡದಿದ್ದರು ಸಹ ಡ್ರಂ ಸೆಟ್ ಜೊತೆಯಲ್ಲಿ ಮೆರವಣಿಗೆ ಪ್ರಾರಂಭಿಸಿದರು. ಆದರೆ ಮೆರವಣಿಗೆಯ ಮಧ್ಯೆ ಡಿ.ಜೆಯನ್ನು ಸೇರಿಸಿಕೊಂಡು ಭಕ್ತರು ಸಂಭ್ರಮಿಸಲು ಪ್ರಾರಂಭಿಸಿದರು. ಸಂಜೆಯ ವೇಳೆಗೆ ಮೆರಣಿಗೆಯ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಅವರು ಡಿಜೆಗೆ ಅನುಮತಿ ನೀಡಿಲ್ಲ. ಅದನ್ನು ಬಂದ್ ಮಾಡಿ ಮೆರವಣಿಗೆ ಮುಂದುವರೆಸುವಂತೆ ಹೇಳಿದರು. ಈ ಸಮಯದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಮೆರವಣಿಗೆ ಸ್ಥಗಿತಗೊಳಿಸಲು ಮುಂದಾದ ಸಮಯದಲ್ಲಿ ಡಿ.ಜೆಗೆ ಮತ್ತೆ ಅವಕಾಶ ಮಾಡಿಕೊಡಲಾಯಿತು.

ADVERTISEMENT

ನಗರದ ವಿವಿಧ ರಸ್ತೆಗಳಲ್ಲಿ ದಿನಪೂರ್ತಿ ಮೆರವಣಿಗೆ ನಡೆಸಿ ರಾತ್ರಿ ಜಾಜಮ್ಮನ ಕಟ್ಟೆಯಲ್ಲಿ‌ ವಿಸರ್ಜಿಸಲಾಯಿತು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮುಖಂಡರಾದ ಆರ್.ರಾಮು, ಆರ್.ರಾಘವೇಂದ್ರ, ಅಂಜಿನಪ್ಪ,
ರೂಪೇಶ್ ಕೃಷ್ಣಯ್ಯ, ಭಾನುಪ್ರಕಾಶ್, ಬಿಜೆಪಿ ಅಧ್ಯಕ್ಷ ವಿಜಯರಾಜು‌ ಅವರು ಮೆರವಣಿಗೆಯ ಪ್ರಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.