ADVERTISEMENT

ಪೊಲೀಸರು, ಪ್ರತಿಭಟನಕಾರರ ಜಟಾಪಟಿ

ಬೈಕ್ ರ‍್ಯಾಲಿಗೆ ನಿರಾಕರಣೆ, ಜನಜೀವನದ ಮೇಲೆ ಪರಿಣಾಮ ಬೀರದ ಕರ್ನಾಟಕ ಬಂದ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 8:10 IST
Last Updated 29 ಸೆಪ್ಟೆಂಬರ್ 2020, 8:10 IST
ಕರ್ನಾಟಕ ಬಂದ್ ಮೇರೆಗೆ ತುಮಕೂರು ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು
ಕರ್ನಾಟಕ ಬಂದ್ ಮೇರೆಗೆ ತುಮಕೂರು ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು   

ತುಮಕೂರು: ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ‘ಕರ್ನಾಟಕ ಬಂದ್‌’ ತುಮಕೂರು ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿಲ್ಲ.

ನಗರದಲ್ಲಿ ಸೋಮವಾರ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಹೋಟೆಲ್ ಸೇರಿದಂತೆ ಅಗತ್ಯ ವಸ್ತು ಪೂರೈಕೆ ಅಂಗಡಿಗಳು ಬಾಗಿಲು ತೆರೆದಿದ್ದವು. ಸಾರ್ವಜನಿಕರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಸಾಮಾನ್ಯವಾಗಿತ್ತು, ಆಟೊ ಸಂಚಾರ ಕಡಿಮೆ ಇತ್ತು. ಎಲ್ಲೆಡೆ ರೈತರು, ಕಾರ್ಮಿಕರು, ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ ಸೇರಿದಂತೆ ಎಡ ಪಕ್ಷಗಳ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಂದ್‌ಗೆ ಬೆಂಬಲ ಸೂಚಿಸಿದ ಇತರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ನಗರದ ಟೌನ್‌ಹಾಲ್‌ನಲ್ಲಿ ಸಮಾವೇಶಗೊಂಡ ವಿವಿಧ ಸಂಘಟನೆಗಳ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಹಿತಕ್ಕೆ ಮಾರಕ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ನಗರ ವಿವಿಧ ಕಡೆಗಳಿಂದ ಬಂದ ಸಂಘಟನೆಗಳ ಕಾರ್ಯಕರ್ತರು ಜಮಾವಣೆಯಾದರು.

ADVERTISEMENT

ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ಮಾಡುವುದಾಗಿ ಘೋಷಿಸಿದರು. ಆರಂಭದಲ್ಲಿಬೈಕ್ ರ‍್ಯಾಲಿಗೆ ಪೊಲೀಸರು ಒಪ್ಪಿಗೆ ಸೂಚಿಸಿದರೂ ನಂತರ ಅವಕಾಶ ನೀಡಲಿಲ್ಲ. ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ‘ಯಾವುದೇ ಕಾರಣಕ್ಕೂ ಬೈಕ್ ರ‍್ಯಾಲಿಗೆ ಅವಕಾಶ ನೀಡುವುದಿಲ್ಲ. ಪ್ರತಿಭಟನೆ ನಡೆಸಿ’ ಎಂದು ಹೇಳಿದರು. ಆಗ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಜಟಾಪಟಿ ಹೆಚ್ಚಿ ಕೆಲವರನ್ನು ಪೊಲೀಸರು ಬಂಧಿಸಿದರು.

ನಡುರಸ್ತೆಯಲ್ಲಿಯೇ ‍ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿದ ಎಸ್‌ಪಿ, ಕಾಲ್ನಡಿಗೆ ಜಾಥಾಕ್ಕೆ ಅವಕಾಶ ನೀಡುತ್ತೇವೆ ಎಂದರು. ಗುಬ್ಬಿ ಗೇಟ್, ಮಂಡಿಪೇಟೆ, ಮಹಾತ್ಮಗಾಂಧಿ ರಸ್ತೆಯಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು. ನಂತರ ಟೌನ್‌ಹಾಲ್‌ನಲ್ಲಿ ಸಮಾವೇಶ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ಉಳುವವನಿಗೆ ಭೂ ಒಡೆತನ ನೀಡಿದ್ದ ಕಾಯ್ದೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿದ್ದುಪಡಿ ತಂದು ರೈತರಲ್ಲದವರಿಗೆ ಭೂಮಿ ಖರೀದಿಸಲು ಅವಕಾಶಕೊಟ್ಟಿದ್ದಾರೆ. ಇದು ರೈತರಿಗೆ ಮರಣ ಶಾಸನ. ರಾಜ್ಯ ಸರ್ಕಾರದ ಕ್ರಮದಿಂದ ಒಂದು ಲಕ್ಷ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಭೂಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯದಿದ್ದರೆ ಹೋರಾಟವನ್ನು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ಯುತ್ತೇವೆ ಎಂದು ಎಚ್ಚರಿಸಿದರು.

ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪ್ರತಿಭಟನೆಯ ಹಕ್ಕು ಕಿತ್ತುಕೊಳ್ಳುತ್ತಿವೆ. ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಇದು ನಿಲ್ಲಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರು ಇದೊಂದು ರಾಜಕೀಯ ಪ್ರೇರಿತ ಬಂದ್ ಎಂದು ಸುಳ್ಳು ಹೇಳುತ್ತಿದ್ದಾರೆ. ರೈತರು ಸ್ವಯಂ ಪ್ರೇರಿತ ಬಂದ್ ನಡೆಸಿದ್ದಾರೆ. ಆದರೆ ರಾಜ್ಯ ಸರ್ಕಾರ ರೈತರ ತೇಜೋವಧೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಕೂಲಿ ಕಾರ್ಮಿಕರ ಸಂಘಟನೆ ಸಂಚಾಲಕ ಎಸ್.ಎನ್.ಸ್ವಾಮಿ, ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕಾರ್ಯದರ್ಶಿ ಬಿ.ಉಮೇಶ್, ಸಿಐಟಿಯು ಮುಖಂಡ ಸೈಯದ್ ಮುಜೀಬ್ ಮಾತನಾಡಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೋರೇಗೌಡ, ಮುಖಂಡರಾದ ಚಿಕ್ಕಣ್ಣ, ರವೀಶ್, ತಿಮ್ಮೇಗೌಡ, ಪ್ರಾಂತ ರೈತ ಸಂಘ ಸಿ.ಅಜ್ಜಪ್ಪ, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಎ.ನರಸಿಂಹಮೂರ್ತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪಂಡಿತ್ ಜವಾಹರ್, ತಾಜುದ್ದೀನ್ ಶರೀಫ್, ಕೊಟ್ಟಶಂಕರ್, ಕನ್ನಡಪರ ಸಂಘಟನೆಗಳ ರಘುರಾಮ್, ಕರ್ನಾಟಕ ರಕ್ಷಣಾ ವೇದಿಕೆಯ ಮಂಜುನಾಥ್‍ಗೌಡ, ಎಐಎಂಎಸ್‍ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಕಲ್ಯಾಣಿ, ಎಐಡಿಎಸ್‍ಒ ಸಂಚಾಲಕಿ ಅಶ್ವಿನಿ, ಎಐಯುಟಿಯುಸಿ ಸಂಚಾಲಕಿ ಮಂಜುಳಾ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.