ADVERTISEMENT

ತುರುವೇಕೆರೆ ಪುರಸಭೆ: ಬಿಜೆಪಿಗೆ ಒಲಿದ ಅಧ್ಯಕ್ಷ ಹುದ್ದೆ

ತುರುವೇಕೆರೆ ಪಟ್ಟಣ ಪಂಚಾಯಿತಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 11:02 IST
Last Updated 30 ಅಕ್ಟೋಬರ್ 2020, 11:02 IST
ತುರುವೇಕೆರೆ ಪಟ್ಟಣದ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಅಂಜನ್‌ ಕುಮಾರ್, ಕೆ.ಭಾಗ್ಯಮಹೇಶ್ ಅವರನ್ನು ತೆರದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು
ತುರುವೇಕೆರೆ ಪಟ್ಟಣದ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಅಂಜನ್‌ ಕುಮಾರ್, ಕೆ.ಭಾಗ್ಯಮಹೇಶ್ ಅವರನ್ನು ತೆರದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು   

ತುರುವೇಕೆರೆ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಂಜನ್‌ ಕುಮಾರ್, ಉಪಾಧ್ಯಕ್ಷರಾಗಿ ಕೆ.ಭಾಗ್ಯ ಮಹೇಶ್ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 14 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 8 ಸದಸ್ಯ ಬಲ ಹೊಂದಿತ್ತು.

ಅಧ್ಯಕ್ಷ ಗಾದಿಗೆ 7ನೇ ವಾರ್ಡ್‍ನ ಅಂಜನ್ ಕುಮಾರ್‌, ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್‍ನ ಕೆ.ಭಾಗ್ಯ ಮಹೇಶ್ ಇಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ತಹಶೀಲ್ದಾರ್ ಆರ್.ನಯಿಂಉನ್ನೀಸಾ ಇಬ್ಬರನ್ನೂ ಅವಿರೋಧ ಆಯ್ಕೆ ಎಂದು ಘೋಷಿಸಿದರು. 3 ಪಕ್ಷಗಳ ಎಲ್ಲ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಸಂಸದ ಜಿ.ಎಸ್.ಬಸವರಾಜು ಉಪಸ್ಥಿತರಿದ್ದರು.

ADVERTISEMENT

ಮೊದಲ ಸಂಭ್ರಮ: ಶಾಸಕ ಮಸಾಲ ಜಯರಾಂ ನೇತೃತ್ವದ ಬಿಜೆಪಿ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬಿಜೆಪಿ ಕಾರ್ಯಕರ್ತರು ಅಧ್ಯಕ್ಷರ ಹೆಸರು ಘೋಷಣೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ತೆರೆದ ವಾಹನದಲ್ಲಿ ಶಾಸಕ ಮಸಾಲ ಜಯರಾಂ, ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಆಶಾರಾಣಿ, ಚಿದಾನಂದ್, ಕೆ.ರವಿ, ಪ್ರಭಾಕರ್, ಮೇಘನ ಸುನಿಲ್, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ವಿ.ಟಿ.ವೆಂಕಟರಾಮ್‌, ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ನರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.