
ತುಮಕೂರು: ಯುಗಾದಿ ಹಬ್ಬದ ಪ್ರಯುಕ್ತ ಅಗತ್ಯ ಸಾಮಗ್ರಿ ಖರೀದಿಗೆ ಮುಂದಾದ ಸಾರ್ವಜನಿಕರಿಗೆ ಬಿಸಿಲಿನ ತಾಪಮಾನದ ಜತೆಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ.
ಸಾರ್ವಜನಿಕರು ಮೈಸುಡುವ ಬಿಸಿಲನ್ನು ಲೆಕ್ಕಿಸದೆ ಹೂವು, ಹಣ್ಣು ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳು ಸೋಮವಾರ ಕಂಡು ಬಂದವು. ಹಲವು ಬಗೆಯ ಹಣ್ಣು, ಮಾವಿನ ಸೊಪ್ಪು, ಬೇವು, ಬಾಳೆ ಎಲೆ–ದಿಂಡು, ವಿವಿಧ ಹೂವುಗಳನ್ನು ಖರೀದಿಸಿದರು. ಅಂತರಸನಹಳ್ಳಿ ಮಾರುಕಟ್ಟೆ, ವಿಶ್ವವಿದ್ಯಾಲಯದ ಮುಂಭಾಗ, ಬಾಳನಕಟ್ಟೆ ಮಾರುಕಟ್ಟೆ, ಬಿ.ಎಚ್.ರಸ್ತೆಯ ವಿವಿಧೆಡೆ ಹೂವು, ಹಣ್ಣು ಮಾರಾಟ ನಡೆಯಿತು.
ಮಾರುಕಟ್ಟೆಯಲ್ಲಿ ಹೂವಿನ ಬೆಲೆ ದುಪ್ಪಟ್ಟಾಗಿದೆ. ಕಳೆದ ಎರಡು ದಿನಗಳ ಹಿಂದೆ ಮಲ್ಲಿಗೆ, ಕನಕಾಂಬರ ಹೂವಿನ ಒಂದು ಮಾರು ₹60ರಿಂದ ₹70 ಇತ್ತು. ಈಗ ಇದು ₹120ರಿಂದ ₹130ಕ್ಕೆ ಏರಿಕೆಯಾಗಿದೆ. ಸೇವಂತಿ ₹150ರಿಂದ ₹200, ಗುಲಾಬಿ ಬೆಲೆ ಕೆ.ಜಿಗೆ ₹250ರಿಂದ ₹400ಕ್ಕೆ ಜಿಗಿದಿದೆ. ಚೆಂಡು ಹೂವು ಮಾರು ₹50ರಿಂದ ₹100ಕ್ಕೆ, ಬಟನ್ಸ್ ಮಾರು ₹150ಕ್ಕೆ ಮಾರಾಟವಾಗುತ್ತಿದೆ.
ರಂಜಾನ್, ಯುಗಾದಿ ಎರಡೂ ಹಬ್ಬಗಳು ಒಟ್ಟಿಗೆ ಬಂದಿವೆ. ಮಂಗಳವಾರ ಯುಗಾದಿ, ಬುಧವಾರ ಅಥವಾ ಗುರುವಾರ ‘ಈದ್ ಉಲ್ ಫಿತ್ರ್’ ಆಚರಿಸಲಾಗುತ್ತಿದೆ. ನಗರದ ಪ್ರಮುಖ ವ್ಯಾಪಾರ ಸ್ಥಳವಾದ ಎಂ.ಜಿ.ರಸ್ತೆಯಲ್ಲಿ ಬಟ್ಟೆಗಳ ಖರೀದಿಯ ಭರಾಟೆ ಜೋರಾಗಿತ್ತು. ಕಳೆದ ಎರಡು ದಿನಗಳಿಂದ ಜನ ಹೊಸ ಬಟ್ಟೆ ಖರೀದಿಯಲ್ಲಿ ನಿರತರಾಗಿದ್ದಾರೆ.
ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಾಲಯಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಭದ್ರಮ್ಮ ಛತ್ರ ವೃತ್ತದ ಬಳಿಯ ಶಂಕರ ಮಠ, ಬಟವಾಡಿಯ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಏ. 9ರಂದು ಸಂಜೆ 6.30 ಗಂಟೆಗೆ ‘ಪಂಚಾಗ ಶ್ರವಣ’ ಕಾರ್ಯಕ್ರಮ ಏರ್ಪಡಿಸಿದೆ. ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ‘ಗಾನ ಪ್ರವಚನ’ ಆಯೋಜಿಸಲಾಗಿದೆ.
ಗುಲಾಬಿ ಕೆ.ಜಿ ₹400 ಹೆಚ್ಚಿದ ವ್ಯಾಪಾರ ವಹಿವಾಟು ದೇಗುಲಗಳಲ್ಲಿ ಅಗತ್ಯ ಸಿದ್ಧತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.