ADVERTISEMENT

ಕ್ರೀಡಾಂಗಣಕ್ಕೆ ಬೇಕಿದೆ ಸಿಂಥೆಟಿಕ್‌ ಟ್ರ್ಯಾಕ್‌

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿದ್ಯುತ್‌, ಕುಡಿಯುವ ನೀರಿನ ಕೊರತೆ

ಸಿ.ಗುರುಮೂರ್ತಿ
Published 4 ಜನವರಿ 2021, 3:22 IST
Last Updated 4 ಜನವರಿ 2021, 3:22 IST
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ನಿರತ ಕ್ರೀಡಾಪಟುಗಳು
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ನಿರತ ಕ್ರೀಡಾಪಟುಗಳು   

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಕ್ರೀಡಾಂಗಣಕ್ಕೆ ತರಬೇತಿಗಾಗಿ ಬರುವವರ ಸಂಖ್ಯೆ ದಿನೇ, ದಿನೇ ಹೆಚ್ಚುತ್ತಿದೆ. ಅಕ್ಕ-ಪಕ್ಕದ ತಾಲ್ಲೂಕಿನ, ಗ್ರಾಮೀಣ ಭಾಗದ ಕ್ರೀಡಾಪಟುಗಳು, ಮಕ್ಕಳು, ಹಿರಿಯರು ಹೀಗೆ ನಿತ್ಯ ನೂರಾರು ಕ್ರೀಡಾಸಕ್ತರು ಕ್ರೀಡಾಂಗಣದತ್ತ ಧಾವಿಸುತ್ತಿದ್ದಾರೆ.

ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್‌ ಹಾಗೂ ಸುತ್ತಲೂ ವಾಕಿಂಗ್ ಪಾಥ್ ನಿರ್ಮಿಸಬೇಕೆನ್ನುವುದು ಕ್ರೀಡಾಸಕ್ತರು, ಸಾರ್ವಜನಿಕರ ಒತ್ತಾಯ.

ಕ್ರೀಡಾಂಗಣಕ್ಕೆ ಬೆಳಿಗ್ಗೆ,ಸಂಜೆ ಕ್ರೀಡಾಪಟು ನಿತ್ಯ ಬರುತ್ತಿದ್ದಾರೆ. ಇತ್ತೀಚೆಗೆ ತಿಪಟೂರು, ತುರುವೇಕೆರೆ ತಾಲ್ಲೂಕಿನಿಂದಲೂ ಕ್ರೀಡಾಪಟುಗಳು ತರಬೇತಿ ಪಡೆಯಲು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳು, ವಯಸ್ಕರು ಹೆಚ್ಚಾಗುವ ನಿರೀಕ್ಷೆಯೂ ಇದೆ. ಕ್ರೀಡಾಂಗಣ ಅಭಿವೃದ್ಧಿಯಾದರೆ ಗ್ರಾಮೀಣ ಭಾಗದ ಕ್ರೀಡಾಪಟುಗಳು ತರಬೇತಿಗಾಗಿ ಬೇರೆ ಕಡೆ ಹೋಗುವುದನ್ನು ತಪ್ಪಿಸಿ ತಾಲ್ಲೂಕಿನಲ್ಲಿಯೇ ತರಬೇತಿ ಪಡೆಯಬಹುದು ಸುಮಾರು 3 ಎಕರೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣಕ್ಕೆ ಬರುತ್ತಿರುವ ಕ್ರೀಡಾಪಟುಗಳು, ಸಾರ್ವಜನಿಕರು ಕ್ರೀಡಾಂಗಣದ ಅಭಿವೃದ್ಧಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕ್ರೀಡಾಂಗಣದಲ್ಲಿ 200 ಮೀಟರ್‌ ರನ್ನಿಂಗ್ ಟ್ರ್ಯಾಕ್‌, ಸಿಂಥೆಟಿಕ್ ಟ್ರ್ಯಾಕ್‌, ಹರ್ಡಲ್ಸ್ ಕ್ರೀಡಾ ಸಲಕರಣೆ ಹಾಗೂ ಕ್ರೀಡಾಂಗಣದ ಸುತ್ತಲೂ ಕಬ್ಬಿಣದ ಬೇಲಿ ನಿರ್ಮಿಸುವುದು, ವಾಯು ವಿಹಾರ ಮಾಡುವವರಿಗೆ ವಾಕಿಂಗ್ ಪಾಥ್ ನಿರ್ಮಿಸುವುದು, ಕುಳಿತುಕೊಳ್ಳುವ ಆಸನ ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ADVERTISEMENT

ಮುದ್ದಹನುಮೇಗೌಡರು ಸಂಸದರಾಗಿದ್ದಾಗ ಕ್ರೀಡಾಪಟುಗಳ ಅನುಕೂಲಕ್ಕಾಗಿ ಜಿಮ್ನಾಶಿಯಂ ಸಲಕರಣೆಗಳನ್ನು ನೀಡಿದ್ದರು. ಆ ಸಲಕರಣೆಗಳನ್ನು ಉಪಯೋಗಿಸಲು ಸಚಿವ ಜೆ.ಸಿ.ಮಾಧುಸ್ವಾಮಿ ಜಿಮ್ನಾಶಿಯಂ ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ. ಅದೇ ರೀತಿ ಇಲ್ಲಿನ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಷಟಲ್‌ ಬ್ಯಾಡ್ಮಿಂಟನ್‌ ಒಳಾಂಗಣ ಕ್ರೀಡಾಂಗಣ ನಿರ್ಮಿಸುವಂತೆ ಕ್ರೀಡಾಪಟುಗಳು ಮನವಿ ಮಾಡಿದ್ದಾರೆ.

ಕುಡಿಯುವ ನೀರಿಗೆ ಪರದಾಟ: ಮುಂಜಾನೆಯಾದರೆ ತಾಲ್ಲೂಕು ಕ್ರೀಡಾಂಗಣಕ್ಕೆ ಹಿರಿಯರು ವಾಯು ವಿಹಾರಕ್ಕೆಂದು, ಯುವಕರು ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಫುಟ್‌ಬಾಲ್ ಸೇರಿದಂತೆ ಹಲವು ಆಟಗಳಿಗೆ ಹಾಗೂ ರಾಷ್ಟ್ರಮಟ್ಟ, ರಾಜ್ಯಮಟ್ಟದಲ್ಲಿ ಆಯ್ಕೆಯಾಗಿರುವ ಕೆಲ ಯುವಕ, ಯುವತಿಯರು ತಮ್ಮ ಕ್ರೀಡೆಯ ತರಬೇತಿಗಾಗಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ತಿಪಟೂರಿನಿಂದ ಹತ್ತಕ್ಕೂ ಹೆಚ್ಚು ಕ್ರೀಡಾಪಟುಗಳು ಇಲ್ಲಿನ ತರಬೇತುದಾರರಿಂದ ತರಬೇತಿ ಪಡೆಯಲು ತಾಲ್ಲೂಕು ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಇವರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನೀರಿಗಾಗಿ ಪರದಾಡುತ್ತಿರುತ್ತಾರೆ. ರಾತ್ರಿಯಾದರೆ ತರಬೇತಿಯಲ್ಲಿ ಪಾಲ್ಗೊಂಡಿರುವವರಿಗೆ, ವಾಯುವಿಹಾರ ಮಾಡುವವರಿಗೆ ವಿದ್ಯುತ್ ಇಲ್ಲದೆ ಸಮಸ್ಯೆಯಾಗುತ್ತಿದೆ. ನೀರಿನ ಹಾಗೂ ವಿದ್ಯುತ್ ವ್ಯವಸ್ಥೆ ನೀಡುವಂತೆ ಕ್ರೀಡಾಪಟುಗಳು ಪುರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.