ADVERTISEMENT

ಕಾಡುತ್ತಲೇ ಇದೆ ರಕ್ತದ ಕೊರತೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 9:41 IST
Last Updated 7 ಜುಲೈ 2021, 9:41 IST

ತುಮಕೂರು: ಕೋವಿಡ್–19 ಸಮಯದಲ್ಲಿ ತೀವ್ರವಾಗಿ ಕಾಡಿದ್ದ ರಕ್ತದ ಕೊರತೆ, ಲಾಕ್‌ಡೌನ್ ಸಡಿಲಗೊಂಡ ನಂತರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ರಕ್ತ ಸಂಗ್ರಹಕ್ಕಿಂತ ಬೇಡಿಕೆ ಅಧಿಕವಾಗುತ್ತಿದ್ದು, ಪೂರೈಕೆ ಕಷ್ಟಕರವಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಸೆಂಟರ್ ಮಾಡಿರುವುದರಿಂದ ರೋಗಿಗಳು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಹಾಗೂ ಇತರೆ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಿಲ್ಲ. ಹೆರಿಗೆ ಹಾಗೂ ಸಣ್ಣಪುಟ್ಟ ಶಸ್ತ್ರ ಚಿಕಿತ್ಸೆಗಳು ಮಾತ್ರ ನಡೆಯುತ್ತಿದ್ದು, ಅದಕ್ಕೆ ತಕ್ಕಷ್ಟು ರಕ್ತವನ್ನು ಹೊಂದಿಸಿ ಕೊಡಲಾಗುತ್ತಿದೆ. ಹಿಂದಿನ ನಾಲ್ಕೈದು ತಿಂಗಳ ಹಿಂದೆ ಸಂಗ್ರಹವಾಗುತ್ತಿದ್ದ ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಇತರ ಆಸ್ಪತ್ರೆಗಳಲ್ಲಿ ರಕ್ತಕ್ಕೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿದ್ದು, ಅದಕ್ಕೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಕಾರಣಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಜನರು ಮುಂದಾಗುತ್ತಿಲ್ಲ. ಸಾಕಷ್ಟು ಮಂದಿ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಿದ್ದಾರೆ. ಹಾಗಾಗಿ ಜಿಲ್ಲಾ ಆಸ್ಪತ್ರೆಯಿಂದ ಹೊರಗಡೆ ಬೇಡಿಕೆಹೆಚ್ಚುತ್ತಲೇ ಸಾಗಿದೆ.

ADVERTISEMENT

ಕೋವಿಡ್ ಸಮಯದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಬಹುತೇಕರು ಮುಂದೂಡಿದ್ದರು. ಲಾಕ್‌ಡೌನ್ ತೆರವಾಗುತ್ತಿದ್ದಂತೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರ ಸಂಖ್ಯೆ ಒಮ್ಮೆಲೆ ಹೆಚ್ಚಾಗಿರುವುದು ಬೇಡಿಕೆ ದುಪ್ಪಟ್ಟಾಗಲು ಪ್ರಮುಖ ಕಾರಣವಾಗಿದೆ. ಪ್ರತಿ ದಿನ ನಮ್ಮ ರಕ್ತ ನಿಧಿ ಕೇಂದ್ರಕ್ಕೆ 15–20 ಯೂನಿಟ್‌ಗೆ ಬೇಡಿಕೆ ಬರುತ್ತಿದೆ. ಅಷ್ಟು ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ. 8–10 ಯೂನಿಟ್ ಪೂರೈಕೆ ಮಾಡುತ್ತಿದ್ದೇವೆ. ಇನ್ನೂ ಕೊರತೆ ಕಾಣಿಸಿಕೊಳ್ಳುತ್ತಿದ್ದು, ಮರು ದಿನಹೊಂದಾಣಿಕೆಮಾಡಿ ಕೊಡಲಾಗುತ್ತಿದೆ ಎಂದು ಖಾಸಗಿ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರೊಬ್ಬರು ತಿಳಿಸಿದರು.

ಕೊರೊನಾ ಸೋಂಕಿತರು ರಕ್ತ ಕೊಡಲು ಮುಂದೆ ಬರುತ್ತಿಲ್ಲ. ಅಂತಹವರಿಂದ ಸಂಗ್ರಹಿಸುತ್ತಿಲ್ಲ. ಜತೆಗೆ ಕೋವಿಡ್ ಲಸಿಕೆ ಪಡೆದವರು 14 ದಿನಗಳ ಕಾಲ ರಕ್ತ ದಾನ ಮಾಡುವಂತಿಲ್ಲ. ಇದರಿಂದ ರಕ್ತ ಸಂಗ್ರಹ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹಲವರು ‘ಲಸಿಕೆ ಪಡೆದಿದ್ದೇವೆ, ರಕ್ತ ಕೊಟ್ಟರೆ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ’ ಎಂದು ರಕ್ತ ನೀಡಲು ಹಿಂದೇಟು ಹಾಕುತ್ತಾರೆ. ದಾನಿಗಳು ಸಹ ಮುಂದಾಗುತ್ತಿಲ್ಲ. ರಕ್ತದಾನ ಮಾಡಿದಸಮಯದಲ್ಲೇ ಕೊರೊನಾ ಸೋಂಕು ತಗುಲಿದರೆ ರೋಗ ನಿರೋಧಕ ಶಕ್ತಿ ಮತ್ತಷ್ಟು ಕಡಿಮೆಯಾಗಿ ಸಮಸ್ಯೆ ಆಗಬಹುದು ಎಂಬ ಮನೋಭಾವನೆಯಿಂದ ರಕ್ತ ದಾನಕ್ಕೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಅಗತ್ಯದಷ್ಟು ಸಂಗ್ರಹವಾಗದೆ ಬೇಡಿಕೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.