ADVERTISEMENT

ಭಾಷಣಕ್ಕೆ ಅಡ್ಡಿಪಡಿಸಿದವರು ಕಾಂಗ್ರೆಸ್ಸಿಗರಲ್ಲ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 15:17 IST
Last Updated 30 ಆಗಸ್ಟ್ 2019, 15:17 IST
ಆರ್.ರಾಮಕೃಷ್ಣ
ಆರ್.ರಾಮಕೃಷ್ಣ   

ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಗುರುವಾರ ಕೆಪಿಸಿಸಿ ಸತ್ಯಶೋಧನಾ ಸಮಿತಿ ಭೇಟಿ ನೀಡಿದ ವೇಳೆ ಬಸವರಾಜ ರಾಯರೆಡ್ಡಿ ಅವರ ಭಾಷಣಕ್ಕೆ ಅಡ್ಡಿಪಡಿಸಿದವರು ಕಾಂಗ್ರೆಸ್ ಪಕ್ಷದವರಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು. ಬಿಜೆಪಿ ಸೇರಲು ಹೊರಟಿರುವವರು ಸಭೆಗೆ ಬಂದು ಗಲಾಟೆ ಮಾಡಿದ್ದಾರೆ. ರಾಯರೆಡ್ಡಿ ಅವರು ಬಿಜೆಪಿ ಟೀಕಿಸಿದರೆ ಇವರಿಗ್ಯಾಕೆ ಸಿಟ್ಟು ಬರಬೇಕು? ನಿಜವಾದ ಕಾಂಗ್ರೆಸ್ ಪಕ್ಷದವರಾಗಿದ್ದರೆ ಚಪ್ಪಾಳೆ ತಟ್ಟುತ್ತಿದ್ದರು’ ಎಂದು ಸ್ಪಷ್ಟಪಡಿಸಿದರು.

ಡಾ.ಜಿ.ಪರಮೇಶ್ವರ ಹಠಾವೊ ಎಂಬ ಭಿತ್ತಿ ಪತ್ರ ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿದಾಗ ಆರ್.ರಾಜೇಂದ್ರ, ರಾಜೇಶ್ ದೊಡ್ಮನೆ ಸೇರಿದಂತೆ ಕೆಲವರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದರು. ಅದನ್ನು ಆಧರಿಸಿ ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ನಾನು ಕ್ರಮ ಕೈಗೊಂಡಿದ್ದೇನೆ. ಆರ್. ರಾಜೇಂದ್ರ ರಾಜ್ಯ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಯಾಗಿರುವುದರಿಂದ ಕೆಪಿಸಿಸಿ ರಾಜ್ಯ ಯುವ ಘಟಕದ ಅಧ್ಯಕ್ಷರಿಗೆ, ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು.

ADVERTISEMENT

ಈ ಸಿಟ್ಟಿನಿಂದಲೇ ರಾಜೇಂದ್ರ ಸಭೆಗೆ ಬೆಂಬಲಿಗರೊಂದಿಗೆ ಬಂದು ಗಲಾಟೆಗೆ ಯತ್ನಿಸಿದರು. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವವರೆಗೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವುದು ಕಷ್ಟ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರಾಗಲಿ, ಕಾಂಗ್ರೆಸ್ ಪಕ್ಷದವರಾಗಲಿ ಯಾರೂ ಹಣ ಕೊಟ್ಟಿಲ್ಲ. ಹಣಕ್ಕೂ ನನಗೂ ಏನು ಸಂಬಂಧ. ನಾನು ಹಣ ಪಡೆದಿದ್ದೆ ಎಂದು ಆರೋಪ ಮಾಡಿದವರೇ ಹಣ ಪಡೆದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕಾರ್ಯದ ಬಗ್ಗೆ ಟೀಕೆ ಮಾಡುತ್ತಿರುವ ಯುವ ಕಾಂಗ್ರೆಸ್‌ನ ಆರ್. ರಾಜೇಂದ್ರ ಯುವ ಕಾಂಗ್ರೆಸ್ ಬಲವರ್ಧನೆಗೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಬೇಕು ಎಂದು ತಿಳಿಸಿದರು.

ಸೈಯದ್ ಬುರಾನ್, ರುದ್ರೇಶ್, ಪ್ರಭು, ನರಸೀಯಪ್ಪ, ಪುಟ್ಟರಾಜು, ಶ್ರೀನಿವಾಸಕುಮಾರ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.