ADVERTISEMENT

ತುಮಕೂರು: ಸಿದ್ಧಗಂಗೆ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 11:20 IST
Last Updated 27 ಫೆಬ್ರುವರಿ 2025, 11:20 IST
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಗುರುವಾರ ನಡೆದ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಸಿದ್ಧಲಿಂಗ ಸ್ವಾಮೀಜಿ ಜತೆಯಲ್ಲಿ ಇತರ ಸ್ವಾಮೀಜಿಗಳು ಭಾಗವಹಿಸಿದ್ದರು
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಗುರುವಾರ ನಡೆದ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಸಿದ್ಧಲಿಂಗ ಸ್ವಾಮೀಜಿ ಜತೆಯಲ್ಲಿ ಇತರ ಸ್ವಾಮೀಜಿಗಳು ಭಾಗವಹಿಸಿದ್ದರು   

ತುಮಕೂರು: ಸಿದ್ಧಗಂಗಾ ಮಠದಲ್ಲಿ ಗುರುವಾರ ಜರುಗಿದ ಸಿದ್ಧಲಿಂಗೇಶ್ವರ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ನಾಡಿನ ವಿವಿಧ ಭಾಗಗಳಿಂದ ಬಂದಿದ್ದವರು ರಥವನ್ನು ಎಳೆದು ಧನ್ಯತಾ ಭಾವ ಮೆರೆದರು. ತಮ್ಮ ಸ್ವಾಮಿಯನ್ನು ಕಣ್ತುಂಬಿಕೊಂಡು, ಭಕ್ತಿ ಸಮರ್ಪಿಸಿದರು. ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಭಕ್ತರು, ಮಠಾಧೀಶರು ರಥವನ್ನು ಮುನ್ನಡೆಸಲು ಕೈಜೋಡಿಸಿದರು. ಸ್ವಾಮಿಯತ್ತ ಕೈ ಮುಗಿದು, ಹೂವು, ಹಣ್ಣು, ದವನ ಎಸೆದು ಹರಕೆ ತೀರಿಸಿದರು.

ಸಿದ್ಧಲಿಂಗೇಶ್ವರ ಸ್ವಾಮಿ ಹಾಗೂ ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಸ್ಮರಣೆಗಳು ಮೊಳಗಿದವು. ಆರಂಭದಿಂದ ಅಂತ್ಯದವರೆಗೂ ಅಕ್ಷರ ಕಲಿಸಿ, ಅನ್ನ, ಆಶ್ರಯ ನೀಡಿ ಪೋಷಿಸಿದ ಗುರುವನ್ನು ನೆನಪು ಮಾಡಿಕೊಂಡರು. ಗುರುವಿನ ಸ್ಮರಣೆ ಕರ್ಣಗಳ ಮೇಲೆ ಬೀಳುತ್ತಲೇ ಇತ್ತು. ಸುಡು ಬಿಸಿಲನ್ನೂ ಲೆಕ್ಕಿಸದೆ ರಥವನ್ನು ಮುನ್ನಡೆಸಿದರು.

ADVERTISEMENT

ಪ್ರತಿ ವರ್ಷವೂ ಶಿವರಾತ್ರಿ ಹಬ್ಬದ ಮರುದಿನ ರಥೋತ್ಸವ ನೆರವೇರುವುದು ಸಂಪ್ರದಾಯ. ಶಿವರಾತ್ರಿ ಸಮಯದಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹ ಮಠಕ್ಕೆ ಬಂದು ಸೇರುತ್ತದೆ. ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಂಡವರು ಬೆಳಿಗ್ಗೆ ನಡೆಯುವ ರಥೋತ್ಸವಕ್ಕೂ ಸಾಕ್ಷಿಯಾಗುತ್ತಾರೆ. ರಥೋತ್ಸವದ ಬಳಿಕ ತಮ್ಮ ಊರಿನತ್ತ ಹೆಜ್ಜೆ ಹಾಕುತ್ತಾರೆ. ಈ ಸಂಪ್ರದಾಯ ಹಾಗೂ ಆಚರಣೆ ಹಲವು ದಶಕಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಮಠದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ ನಂತರ ರಥಕ್ಕೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಃ, ಕಳಸಗಳ ಆರಾಧನೆ, ರಥಾಂಗ ಪೂಜೆ ಸಲ್ಲಿಸಲಾಯಿತು. ಸಿದ್ಧಗಂಗಾ ಕ್ಷೇತ್ರದ ಆರಾಧ್ಯ ದೈವ ಸಿದ್ಧಲಿಂಗೇಶ್ವರ ಸ್ವಾಮಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಹಾಗೂ ಅಷ್ಟೋತ್ತರ ಪೂಜೆ ನೆರವೇರಿಸಲಾಯಿತು. ರಥದ ಮುಂಭಾಗದಲ್ಲಿ ಜಯಾದಿ ಹೋಮ, ಗಣ ಹೋಮ, ಮೃತ್ಯುಂಜಯ ಹೋಮ ನಡೆಯಿತು.

ಗುರುವಾರ ಬೆಳಿಗ್ಗೆ 11.55ರ ವೇಳೆಗೆ ಸಿದ್ಧಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಕಿರಿಯ ಸ್ವಾಮೀಜಿ ಶಿವಸಿದ್ಧೇಶ್ವರ ಸ್ವಾಮೀಜಿ ನೆರವಾದರು. ಶುಭ ಲಗ್ನದಲ್ಲಿ ರಥದ ಗಾಲಿಗೆ ತೆಂಗಿನ ಕಾಯಿ ಒಡೆದು, ಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ರಥೋತ್ಸವ ವಿಧ್ಯುಕ್ತ ಚಾಲನೆ ಪಡೆದುಕೊಂಡಿತು.

ರಥವನ್ನು ಅಭೂತಪೂರ್ಣ ವಸ್ತ್ರಗಳು, ಸುವರ್ಣ ಕಲಶಗಳು, ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ಹಾಗೂ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು. ರಥ ಸಾಗಿದ ಮಾರ್ಗದುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾದಸ್ವರ, ವೀರಗಾಸೆ, ಪಟ ಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಆಕರ್ಷಿಸಿದವು.

ರಥೋತ್ಸವದ ಸಂದರ್ಭದಲ್ಲಿ ಬಂದಿದ್ದ ಭಕ್ತಾದಿಗಳಿಗೆ ಸಂಘ, ಸಂಸ್ಥೆಗಳಿಂದ ಪಾನಕ, ಮಜ್ಜಿಗೆ ವಿತರಿಸಲಾಯಿತು.

ಕಲಾ ತಂಡಗಳ ಪ್ರದರ್ಶನ
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.