ADVERTISEMENT

ಹಾಸ್ಟೆಲ್‌ನಿಂದ ಮೂವರು ವಿದ್ಯಾರ್ಥಿಗಳು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 5:44 IST
Last Updated 15 ನವೆಂಬರ್ 2021, 5:44 IST

ತುಮಕೂರು: ತಾಲ್ಲೂಕಿನ ಹೆಬ್ಬೂರು ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೂವರು ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಗಿದೆ.

ಒಂದು ವಾರದ ಹಿಂದೆಯೇ ಹಾಸ್ಟೆಲ್‌ನಿಂದ ಹೊರಗೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಹಾಸ್ಟೆಲ್‌ನಲ್ಲಿ ಸರಿಯಾಗಿ ಊಟ ನೀಡದಿರುವುದು, ಇತರ ಸಮಸ್ಯೆಗಳನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಹಿಂಸೆ ನೀಡಿ ಹೊರಗೆ ಕಳುಹಿಸಲಾಗಿದೆ. ದಾರಿ ಕಾಣದ ಮಕ್ಕಳು ನಾಗವಲ್ಲಿ ಸಮೀಪದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಇದನ್ನು ಗಮನಿಸಿದ ಪೊಲೀಸರು ವಿಚಾರಣೆ ಮಾಡಿದಾಗ ಹಾಸ್ಟೆಲ್‌ನಿಂದ ಹೊರಗೆ ಕಳುಹಿಸಿರುವುದು ಬೆಳಕಿಗೆ ಬಂದಿದೆ. ನಂತರ ಆ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸಿಕೊಡಲಾಗಿತ್ತು.

ADVERTISEMENT

ಹಾಸ್ಟೆಲ್‌ಗೆ ಬಂದ ವಿದ್ಯಾರ್ಥಿಗಳನ್ನು ಮತ್ತೆ ವಾಪಸ್‌ ಮನೆಗಳಿಗೆ ಕಳುಹಿಸಲಾಗಿದೆ. ಪಾಠದಿಂದ ವಂಚಿತರಾಗುತ್ತಿದ್ದು, ಮತ್ತೆ ಸೇರಿಸಿಕೊಳ್ಳುವಂತೆ ಪೋಷಕರು ಮಾಡಿಕೊಂಡ ಮನವಿಗೂ ಸ್ಪಂದಿಸಿಲ್ಲ.

‘ನಿಮ್ಮ ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಇಟ್ಟುಕೊಳ್ಳುವುದಿಲ್ಲ. ಎಲ್ಲಿಗಾದರೂ ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಮಕ್ಕಳು ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಶಿಕ್ಷಣ ಸಿಗದಂತಾಗಿದೆ’ ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.