ADVERTISEMENT

ಬಟ್ಟೆ ಅಂಗಡಿಯಲ್ಲಿ ಕಳ್ಳಿಯರ ಕರಾಮತ್ತು; ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:25 IST
Last Updated 2 ಮೇ 2019, 11:25 IST
ತಿಪಟೂರು ಬಟ್ಟೆ ಅಂಗಡಿಯಲ್ಲಿ ಕಳ್ಳಿಯರು ಸಾಮಗ್ರಿ ಕದ್ದಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ತಿಪಟೂರು ಬಟ್ಟೆ ಅಂಗಡಿಯಲ್ಲಿ ಕಳ್ಳಿಯರು ಸಾಮಗ್ರಿ ಕದ್ದಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ   

ತಿಪಟೂರು: ನಗರದ ಬಟ್ಟೆ ಅಂಗಡಿಯೊಂದರಲ್ಲಿ ಕಳ್ಳಿಯರು ಚಾಲಾಕಿತನದಿಂದ ಬಟ್ಟೆಗಳನ್ನು ಕದ್ದಿದ್ದು ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ನಗರದ ಆರ್‌ಆರ್ ಯೂತ್ ಕಲೆಕ್ಷನ್ ಬಟ್ಟೆ ಅಂಗಡಿಯೊಂದರಲ್ಲಿ ಸಂಜೆ ನಾಲ್ಕು ಗಂಟೆ ವೇಳೆ ಇಬ್ಬರು ಮಹಿಳೆಯರು ಸುಮಾರು ಐದರಿಂದ ಆರು ಸಾವಿರ ರೂಪಾಯಿ ಮೌಲ್ಯದ ಬಟ್ಟೆಗಳನ್ನು ಕದ್ದೊಯ್ದಿದ್ದಾರೆ.

ಇಬ್ಬರೂ ಅಂಗಡಿ ಪ್ರವೇಶ ಮಾಡಿದ ನಂತರ ಬಟ್ಟೆಯನ್ನು ಖರೀದಿಸುವ ನೆಪದಲ್ಲಿ ಮೊದಲು ಬಟ್ಟೆಯನ್ನು ಬದಲಾಯಿಸುವ ಕೋಣೆಗೆ ತೆರಳಿದ್ದಾರೆ. ಅಲ್ಲಿ ಕೆಲವು ನಿಮಿಷ ಇದ್ದು ಆ ನಂತರ ಹೊರಗೆ ಬಂದು ಮತ್ತೊಂದು ಬಟ್ಟೆ ನೋಡುವಂತೆ ನಟಿಸಿ ಕೆಲಸಗಾರರ ಕಣ್ಣುತಪ್ಪಿಸಿ ಬಟ್ಟೆಗಳನ್ನು ತಾವು ತಂದಿದ್ದ ಬ್ಯಾಗ್‌ಗೆ ತುಂಬಿಕೊಂಡಿದ್ದಾರೆ.

ADVERTISEMENT

ಬಳಿಕ ಅಲ್ಲಿಂದ ತೆರಳಿದ ದೃಶ್ಯ ಸಿಸಿಟಿವಿ ಕ್ಯಾಮೆರದಾಲ್ಲಿ ಸೆರೆಯಾಗಿವೆ. ಅಲ್ಲಿಂದ ನೇರವಾಗಿ ಅಂಗಡಿಯ ಕೆಳಭಾಗದಲ್ಲಿ ಇರುವ ಅಪೊಲೋ ಮೆಡಿಕಲ್‌ಗೆ ತೆರಳಿದ್ದಾರೆ. ಅಲ್ಲೂ ಹಲವಾರು ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಕೆಲ ಹೊತ್ತಿನಲ್ಲೇ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಗಮನಿಸಿದ ಅಪೊಲೋ ಮೆಡಿಕಲ್ ಸಿಬ್ಬಂದಿ ಬಟ್ಟೆ ಅಂಗಡಿ ಮಾಲೀಕರಿಗೆ ಈ ವಿಚಾರ ತಿಳಿಸಿದರು. ಬಳಿಕ ಬಟ್ಟೆ ಅಂಗಡಿಯ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಅಪೊಲೋ ಮೆಡಿಕಲ್‌ನಿಂದ ತೆರಳಿದ ಮಹಿಳೆಯರು ಪಕ್ಕದಲ್ಲೇ ಇರುವ ಮೋರ್ ಮಾಲ್‌ಗೆ ತೆರಳಿದ್ದಾರೆ. ಅಲ್ಲಿ ಜನಸಂದಣಿ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಗಮನಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸುಮಾರು ನಲವತ್ತು ವರ್ಷ ವಯಸ್ಸಿನ ಹೆಂಗಸರು ಈ ಕೃತ್ಯ ಎಸಗಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.