ADVERTISEMENT

ಮತ್ತೆ ಚಿಗುರಿದ ‘ತೆಂಗು ಪಾರ್ಕ್‌’ ಕನಸು

ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್‌; ಖಾಸಗಿ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 9:59 IST
Last Updated 6 ಮಾರ್ಚ್ 2020, 9:59 IST
ತೆಂಗಿನ ತೋಟ
ತೆಂಗಿನ ತೋಟ   

ತುಮಕೂರು: 2012-13ರಲ್ಲಿ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಮೊಳಕೆಯೊಡೆದು ಬಳಿಕ ಆಡಳಿತ ವರ್ಗದ ನಿರಾಸಕ್ತಿಯಿಂದ ಕಮರಿ ಹೋಗಿದ್ದ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್‌ ಸ್ಥಾಪನೆಯ ಕನಸು ರಾಜ್ಯ ಬಜೆಟ್‌ನಲ್ಲಿ ಮತ್ತೆ ಚಿಗುರಿದೆ.

ಕಲ್ಪವೃಕ್ಷದ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಈ ಪಾರ್ಕ್ ಅನ್ನು ತಿಪಟೂರು ತಾಲ್ಲೂಕಿನಲ್ಲಿ ಸ್ಥಾಪಿಸುವುದಾಗಿ ಸರ್ಕಾರ ಪುನರುಚ್ಚರಿಸಿದೆ. ಇದರಿಂದ ಏನೆಲ್ಲಾ ಅನುಕೂಲ ಆಗಬಹುದು ಎಂದು ಬೆಳೆಗಾರರು ಎದುರು ನೋಡುತ್ತಿದ್ದಾರೆ. ಮತ್ತೆ ಬಜೆಟ್‌ ಪ್ರತಿಯಲ್ಲೇ ಯೋಜನೆ ಉಳಿಯುವುದೇ? ಎಂಬ ಆತಂಕವೂ ಎದುರಾಗಿದೆ.

ಸದ್ಯದ ಮಾಹಿತಿ ಪ್ರಕಾರ, ತಿಪಟೂರಿನಿಂದ 8 ಕಿ.ಮೀ ದೂರವಿರುವ ಕೊನೆಹಳ್ಳಿ ಕಾವಲು ಪ್ರದೇಶದಲ್ಲಿ ಈ ವಿಶೇಷ ಪಾರ್ಕ್‌ ನಿರ್ಮಾಣಕ್ಕೆ ಸರ್ಕಾರ ಯೋಜಿಸುತ್ತಿದೆ. ಈ ಕಾವಲು ಪ್ರದೇಶದಲ್ಲಿ ಸುಮಾರು 1,600 ಎಕರೆ ಜಮೀನಿದೆ. ಸಮೀಪದಲ್ಲೇ ಕೃಷಿ ಕಾಲೇಜು ಇದೆ. ಇದರಲ್ಲಿ 100 ಎಕರೆ ಜಮೀನನ್ನು ಗುರುತಿಸಿ, ಅದರಲ್ಲಿ ಈ ಪಾರ್ಕ್‌ ಸ್ಥಾಪಿಸುವ ಲೆಕ್ಕಚಾರ ಹಾಕಲಾಗುತ್ತಿದೆ.

ADVERTISEMENT

ಏನಿರುತ್ತೆ ಈ ಪಾರ್ಕ್‌ನಲ್ಲಿ: ಗುರುತಿಸಿದ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ತೆಂಗು ಪಾರ್ಕ್ (ಕೈಗಾರಿಕಾ ಪ್ರದೇಶ) ಅಭಿವೃದ್ಧಿಯಾಗಲಿದೆ. ಪಾರ್ಕ್‌ನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ಯಮಿಗಳಿಗೆ ಸಹಾಯಧನ ಸಹ ಸಿಗಲಿದೆ. ಪ್ರಯೋಗಾಲಯಗಳು ನಿರ್ಮಾಣ ಆಗಲಿದೆ. ತೆಂಗಿನ ನಾರು ಉದ್ಯಮ ಅಭಿವೃದ್ಧಿಪಡಿಸುವ ಸಂಶೋಧನೆಗಳು ಇಲ್ಲಿ ನಡೆಯಲಿದೆ. ಚಿಪ್ಪು, ತೆಂಗಿನ ಸಿಪ್ಪೆಯಿಂದ ಯಾವೆಲ್ಲ ಉತ್ಪನ್ನಗಳನ್ನು ತಯಾರಿಸಬಹುದು ಎಂಬ ಅಧ್ಯಯನವೂ ಇಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನನೆಗುದಿಗೆ ಬಿದ್ದಿದ್ದ ಪಾರ್ಕ್‌: ಜಗದೀಶ್‌ ಶೆಟ್ಟರ್‌ ಅವರ ಕಾಲದಲ್ಲಿ ಮೂಡಿದ್ದ ಈ ಪಾರ್ಕ್‌ ಸ್ಥಾಪನೆಯ ಯೋಜನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ₹1.75 ಕೋಟಿ ಮೀಸಲಿಡಲಾಗಿತ್ತು. ಯೋಜನೆ ಕಾಲಮಿತಿಯೊಳಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹಾಗಾಗಿ 2018ರ ಮಾರ್ಚ್‌ನಲ್ಲಿ ಒಂದು ಮುಕ್ಕಾಲು ಕೋಟಿಯನ್ನು ಹಾಗೂ ಅದರ ಬಡ್ಡಿಯನ್ನು ಮರಳಿ ನೀಡುವಂತೆ ಸರ್ಕಾರ, ಜಿಲ್ಲಾಡಳಿತಕ್ಕೆ ಪತ್ರ ಬರೆದಿತ್ತು. ಆ ಬಳಿಕ ಈ ಯೋಜನೆ ಮೂಲೆ ಸೇರಿತ್ತು. ಈಗ ಮತ್ತೊಮ್ಮೆ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

*

ತೆಂಗು ಬೆಳೆ ಅಂದರೆ ಕೊಬ್ಬರಿ, ಕಾಯಿ ಮಾರಾಟಕ್ಕೆ ಸೀಮಿತವಲ್ಲ. ಅದರ ಪ್ರತಿ ಉತ್ಪನ್ನದ ಮೌಲ್ಯವರ್ಧನೆ ಮಾಡಬೇಕೆಂಬ ಆಶಯ ಸರ್ಕಾರದ್ದು. ತೆಂಗು ಪಾರ್ಕ್‌ ನಿರ್ಮಾಣದ ರೂಪರೇಷೆ ಶೀಘ್ರ ಸಿದ್ಧವಾಗಲಿದೆ
ಬಿ.ಸಿ.ನಾಗೇಶ್‌, ಶಾಸಕ, ತಿಪಟೂರು
*

ಜಿಟಿಟಿಸಿಯಲ್ಲಿ ಉತ್ಕೃಷ್ಟತಾ ಕೇಂದ್ರ

ತುಮಕೂರಿನ ಸರ್ಕಾರಿ ಉಪಕರಣಾಗಾರ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ (ಜಿಟಿಟಿಸಿ) ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ರಾಜ್ಯದಲ್ಲಿನ ಉಳಿದ 6 ಜಿಟಿಟಿಸಿಗಳೊಂದಿಗೆ ಈ ಕೇಂದ್ರವನ್ನು ಸಹ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದಕ್ಕಾಗಿ ₹353 ಕೋಟಿ ವೆಚ್ಚ ಮಾಡಲು ಯೋಜಿಸಲಾಗಿದೆ.

ಈ ಕೇಂದ್ರಗಳಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಸುಧಾರಿತ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಇಲ್ಲಿನ ತರಬೇತಿಯಿಂದ 12,600 ವಿದ್ಯಾರ್ಥಿಗಳಿಗೆ ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಸಿಗಲಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

**

ಈಡೇರದ ಬೇಡಿಕೆ

* ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ

* ಮಧುಗಿರಿ ಕಂದಾಯ ಜಿಲ್ಲೆಯಾಗಿ ಘೋಷಣೆ

* ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ

* ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಅನುದಾನ

* ಎತ್ತಿನಹೊಳೆ ಯೋಜನೆಯಡಿ ತಿಪಟೂರು ಮತ್ತು ತುಮಕೂರು ಗ್ರಾಮಾಂತರ ಕೆರೆಗಳಿಗೆ ನೀರು

* ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಒತ್ತು

* ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲುಮಾರ್ಗದ ಅನುಷ್ಠಾನಕ್ಕೆ ಅನುದಾನ

* ಹೇಮಾವತಿ ನಾಲೆ ಆಧುನೀಕರಣಕ್ಕೆ ಹೆಚ್ಚಿನ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.