ADVERTISEMENT

ಗಡಿಯಾರ ಗೋಪುರಕ್ಕೆ ಹಲವರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:59 IST
Last Updated 17 ಆಗಸ್ಟ್ 2025, 5:59 IST
ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಅಳವಡಿಸಿರುವ ಗಡಿಯಾರ ಗೋಪುರ.
ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಅಳವಡಿಸಿರುವ ಗಡಿಯಾರ ಗೋಪುರ.   

ತಿಪಟೂರು: ತಾಲ್ಲೂಕಿನ ಸಿಂಗ್ರಿ ನಂಜಪ್ಪ ವೃತ್ತದಲ್ಲಿದ್ದ ಹೈಮಾಸ್ಟ್ ವಿದ್ಯುತ್ ದೀಪ ತೆರವುಗೊಳಿಸಿ, ಅಲ್ಲಿ ರೋಟರಿ ಸಂಸ್ಥೆಯಿಂದ ನೀಡಿರುವ ಗಡಿಯಾರ ಗೋಪುರವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಅಂದಾಜು ₹50 ಸಾವಿರ ಮೌಲ್ಯದ ಗಡಿಯಾರ ಗೋಪುರಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ. ಹೈಮಾಸ್ಟ್ ದೀಪ ತೆರವುಗೊಳಿಸಿರುವುದರಿದರಿಂದ ಬೆಳಕಿಗೆ ತೊಂದರೆಯಾಗಿದೆ ಹಾಗೂ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. 

ಈ ಗಡಿಯಾರದಲ್ಲಿ ರೋಮನ್ ಅಂಕಿಯಲ್ಲಿರುವುದರಿಂದ ಎಲ್ಲರಿಗೂ ಅರ್ಥೈಸಿಕೊಳ್ಳಲು ಕಷ್ಟ. ಸಮಯ ನೋಡಲು ಜನರು ಹತ್ತಿರ ಬಂದು ನಿಲ್ಲಬೇಕಿದೆ. ಗೋಪುರದ ವಿನ್ಯಾಸವೂ ಸಮರ್ಥನೀಯವಾಗಿಲ್ಲ.

ADVERTISEMENT

ಗಡಿಯಾರದಲ್ಲಿ ಕನ್ನಡ ಅಂಕಿ ಇರಬೇಕು. ದೂರದಿಂದ ಸ್ಪಷ್ಟವಾಗಿ ಕಾಣುವಂತೆ ತಿದ್ದುಪಡಿಸಬೇಕು. ಹೈಮಾಸ್ಟ್ ಬೆಳಕಿನ ಸಮಾನ ಪರ್ಯಾಯವನ್ನು ತಕ್ಷಣ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

‘ಅಭಿವೃದ್ಧಿ ಎಂದರೆ ಕೇವಲ ಕಂಗೊಳಿಸುವ ವಸ್ತು ಅಳವಡಿಸುವುದಲ್ಲ. ಜನರಿಗೆ ಉಪಯುಕ್ತವಾಗುವಂತಿರಬೇಕು. ಜನರ ಹಣದ ಪ್ರಾಮಾಣಿಕ ಬಳಕೆಯಾಗಬೇಕು’ ಎಂದು ರಮೇಶ್ ಟಿ.ಆರ್. ಹೇಳಿದರು.

‘ಕನ್ನಡವನ್ನು ನಿರ್ಲಕ್ಷಿಸಿ ರೋಮನ್ ಲಿಪಿ ಬಳಸಿ ಕನ್ನಡಕ್ಕೆ ಅವಮಾನಿಸಲಾಗಿದೆ. ಶೀಘ್ರ ಜನರಿಗೆ ಅರ್ಥವಾಗುವಂತೆ, ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕು’ ಎಂದು ಕಸಾಪ ಕಾರ್ಯದರ್ಶಿ ಮಂಜಪ್ಪ ಒತ್ತಾಯಿಸಿದರು.

‘ಸಮಯ ನೋಡಲು ಜನ ವಾಚ್ ಕಟ್ಟಿರುತ್ತಾರೆ ಅಥವಾ ಮೊಬೈಲ್‌ನಲ್ಲಿ ಸಮಯ ನೋಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಬೆಳಕು ಬಹಳ ಮುಖ್ಯ. ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಬೆಳಕು ಮುಖ್ಯ’ ಎನ್ನುತ್ತಾರೆ ಉಜ್ಜಜ್ಜಿ ರಾಜಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.